ಧ್ವಜ
ಒಂದು ರಾಷ್ಟ್ರದ, ರಾಜ್ಯದ, ರಾಜವಂಶದ, ಸಮುದಾಯದ ಪಡೆಯ, ಸಂಸ್ಥೆಯ ಇಲ್ಲವೇ ಒಬ್ಬ ಅಧಿಕಾರಿಯ ಲಾಂಛನವಾಗಿ ಅಥವಾ ಸಂಜ್ಞೆಗಳ, ಅಲಂಕಾರದ ಇಲ್ಲವೇ ಪ್ರದರ್ಶನದ ಸಾಧನವಾಗಿ ಉಪಯೋಗಿಸಲಾಗುತ್ತಿರುವ ಬಟ್ಟೆಯ ಇಲ್ಲವೇ ಅಂಥದೇ ವಸ್ತುವಿನ ತುಂಡು (ಫ್ಲ್ಯಾಗ್). ಗಾಳಿಯಲ್ಲಿ ನಿರಾಂತಕವಾಗಿ ಹಾರಾಡಬರುವಂತೆ ಇದರ ಒಂದು ಬದಿಯನ್ನು ಒಂದು ಸ್ತಂಭಕ್ಕಾಗಲಿ ದಂಡಕ್ಕಾಗಲಿ ಹುರಿಗಾಗಲಿ ಕಟ್ಟಿರುತ್ತಾರೆ.  ಧ್ವಜಗಳ ಆಕಾರ, ಆಕೃತಿ ಮತ್ತು ಬಣ್ಣಗಳಲ್ಲಿ ವೈವಿಧ್ಯವಿರಬಹುದಾದರೂ  ಅವು ಬಹುತೇಕ ಇರುವುದು ಆಯತಾಕೃತಿಯಲ್ಲಿ. ಒಂದೇ ಆಕೃತಿಯ ಮತ್ತು ಒಂದೇ ಉದ್ದೇಶದ ಧ್ವಜಗಳ ಆಕಾರದಲ್ಲಿ  ಹೆಚ್ಚು ಕಡಿಮೆಯಿರಬಹುದಾದರೂ ಅವುಗಳ ಉದ್ದ ಮತ್ತು ಅಗಲಗಳ ನಡುವಿನ ಪ್ರಮಾಣ ಒಂದೇ ಇರುತ್ತದೆ. ಉದಾ : ಅಮೆರಿಕ ಸಂಯುಕ್ತ ಸಂಸ್ಥಾನದ ಸೈನ್ಯ, ರಾಷ್ಟ್ರಧ್ವಜದ ಮೂರು ವಿನ್ಯಾಸಗಳನ್ನು (ಡಿಸೈನ್) ಬಳಸುತ್ತಿದೆ. ಉತ್ಸವ ದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಗ್ಯಾರಿಸನ್ ಬಳಸುವ ಧ್ವಜದ ಉದ್ದ 38 ಅಡಿ. ಅಗಲ 20 ಅಡಿ.  ಬಂದರುಗಳಲ್ಲಿ ಸಾಮಾನ್ಯವಾಗಿ ಹಾರಿಸಲಾಗುವ ಧ್ವಜದ ಉದ್ದ 19 ಅಡಿ. ಮತ್ತು ಅಗಲ 10ಅಡಿ. ಕೆಟ್ಟ ಹವಾಗುಣವನ್ನು ಸೂಚಿಸುವ ಧ್ವಜದ ಉದ್ದ 9 ಅಡಿ. 6 ಅಂಗುಲ, ಅಗಲ 5 ಅಡಿ. ಧ್ವಜಗಳ ಉದ್ದೇಶ ಉಪಯೋಗಗಳಿಗೆ ಅನುಗುಣವಾಗಿ ಅವನ್ನು ರಾಷ್ಟ್ರಧ್ವಜ, ರಾಜ್ಯ ಧ್ವಜ, ರಾಜಧ್ವಜ, ನೌಕಾಧ್ವಜ, ಸೇನಾಧ್ವಜ, ಪಕ್ಷ ಧ್ವಜ ಮುಂತಾಗಿ ವಿಭಾಗಿಸಬಹುದು. ರಾಷ್ಟ್ರದ ಲಾಂಛನ ರಾಷ್ಟ್ರಧ್ವಜ : ರಾಜ್ಯ, ನೌಕೆ, ಸೇನೆ, ಪಕ್ಷ ಇವುಗಳ ಲಾಂಛನಗಳನ್ನು ಅನುಕ್ರಮವಾಗಿ ರಾಜ್ಯ ನೌಕಾ, ಸೇನಾ ಮತ್ತು ಪಕ್ಷಧ್ವಜಗಳು. ಧ್ವಜದ ಉದ್ದೇಶ ಸಫಲವಾಗಬೇಕಾದರೆ ಅದು ನಿರಾತಂಕವಾಗಿ ಗಾಳಿಯಲ್ಲಿ ಹಾರಾಡುವುದು ಅವಶ್ಯವಾದ್ದರಿಂದ ಅದನ್ನು ಹಗುರವಾದ ಸಾಮಗ್ರಿಯಿಂದ ಮಾಡಿರುವುದೂ ಅದರ ಎರಡೂ ಬದಿಗೆ ಒಂದೇ ಬಗೆಯ ಚಿಹ್ನೆಗಳು, ಬಣ್ಣಗಳು ಇದ್ದು ಯಾವ ಬದಿಯಿಂದ ನೋಡಿದರೂ ಅದು ಒಂದೇ  ಸಮನಾಗಿ ಕಾಣುವುದೂ ಅವಶ್ಯ. ಆದ್ದರಿಂದ ಸಾಮಾನ್ಯವಾಗಿ ಧ್ವಜಗಳ ಮೇಲೆ ವಾಕ್ಯ ಪದ ಅಥವಾ ಪದಗುಚ್ಚಗಳನ್ನು ಹಾಕುವುದಿಲ್ಲ. ಸಾದಾ ಚಿತ್ರಾಲಂಕಾರಗಳು ಮಾತ್ರ ಇರುತ್ತವೆ.	

	ಉಗಮ ಮತ್ತು ವಿಕಾಸ: ಧ್ವಜಗಳ ಬಳಕೆ ಸಾವಿರಾರು ವರ್ಷಗಳಷ್ಟು ಹಳೆಯದು. ನಾಯಕನಿಗೆ ಅನುಯಾಯಿಗಳ ಮೇಲಿರುವ ಅಧಿಕಾರದ ಪ್ರತೀಕವಾದ ಬಾರುಸಹಿತ ಚಾವಟಿಯೇ ಅದರ ಮೂಲರೂಪವೆಂದು  ಹೇಳಲಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಬೇಟೆಗಾರರು ಮತ್ತು ಯೋಧರು ತಮ್ಮ ಗುರುತಿಗಾಗಿ ಏನಾದರೂ ಸಂಕೇತವನ್ನು ಹಿಡಿದುಕೊಂಡು ಹೋಗುತ್ತಿದ್ದರು. ಒಂದು ಕೋಲಿನ ತುದಿಗೆ ಪ್ರಾಣಿಯ ಚರ್ಮವನ್ನೋ ಗರಿಗಳನ್ನೋ ಕಟ್ಟಲಾಗುತ್ತಿತ್ತು. ಬರುತ್ತಿರುವವರು ಮಿತ್ರರೋ ಶತ್ರುಗಳೋ ಎಂಬುದನ್ನು ಈ ಸಂಕೇತದಿಂದ ಅರಿಯುವುದು ಸಾಧ್ಯವಾಗುತ್ತಿತ್ತು. ಈಜಿಪ್ಟಿನ ಸೈನಿಕರು ಮೂಲದಲ್ಲಿ ಗರಿಗಳ ಬೀಸಣಿಕೆಯನ್ನು, ಅನಂತರ ಲೋಹದಲ್ಲಿ ಕೆತ್ತಿದ ಪ್ರಾಣಿಯ ಇಲ್ಲವೇ ಹಕ್ಕಿಯ ವಿಗ್ರಹವನ್ನು ಕೋಲಿಗೆ ಕಟ್ಟುತ್ತಿದ್ದರು.  ಸೈನ್ಯದ ಪ್ರತಿ  ಭಾಗಕ್ಕೂ  ಈ ತೆರದ ಲಾಂಛನವಿರುತ್ತಿತ್ತು. ಇದರಿಂದ ನಾಯಕರು ಸೈನ್ಯದ ಬೇರೆ ಬೇರೆ ಭಾಗಗಳನ್ನು ಸುಲಭವಾಗಿ ಗುರುತಿಸಬಹುದಾಗಿತ್ತು. ಅಸ್ಸಿರಿಯ ದೇಶದಲ್ಲಿ ಕ್ರಿ. ಪೂ. 9ನೇ ಶತಮಾನದ ಸುಮಾರಿಗೆ ಇಂಥ ಲಾಂಛನಗಳನ್ನು ಉಪಯೋಗಿಸಲಾಗುತ್ತಿತ್ತೆನ್ನುವುದಕ್ಕೆ ಸಾಕಷ್ಟು ಪುರಾವೆ ದೊರೆತಿದೆ. ಅರಸರಾದ 2ನೆಯ  ಆಷುರ್ನಾಸಿರ್ಪಾಲ್ (ಕ್ರಿ. ಪೂ 884-859). ಸಾರ್ಗಾನ್ (ಕ್ರಿ. ಪೂ. 772-705). ಸೆನಾಕೆರಿಬ್ (ಕ್ರಿ. ಪೂ. 705-681) ಇವರ ಕಾಲದಲ್ಲಿ ಯೋಧರೂ ಬೇಟೆಗಾರರೂ ಧ್ವಜಗಳನ್ನು ಉಪಯೋಗಿಸುತ್ತಿದ್ದರು. ಕ್ರಿ. ಪೂ. 671ರಲ್ಲಿ ಅಸ್ಸಿರಿಯದ ಒಬ್ಬ ಯೋಧ ತನ್ನ ವಿಭಾಗದ ಧ್ವಜವನ್ನು ಹಿಡಿದಿರುವ ಪ್ರತಿಮೆಯಿಂದ ಧ್ವಜದ ಉಪಯೋಗ ಸ್ಪಷ್ಟವಾಗುತ್ತದೆ. ಪರ್ಷಿಯನ್ನರು  ಹದ್ದು  ಸೂರ್ಯರ ಚಿಹ್ನೆಗಳನ್ನು ಬಳಸುತ್ತಿದ್ದರು ಗ್ರೀಕರು ಭರ್ಜಿಯ ತುದಿಗೆ ಶಿರಸ್ತ್ರಾಣವನ್ನೋ ಚಿಲಕತ್ತಿನ ಭಾಗವನ್ನೋ ಕಟ್ಟುತ್ತಿದ್ದರು. ರೋಮನರು ದೇವತೆಗಳ, ಸೇನಾ ನಾಯಕರ, ಇಲ್ಲವೇ ತೋಳ, ಕುದುರೆ, ಕರಡಿ, ಮುಂತಾದ ಪ್ರಾಣಿಗಳ ವಿಗ್ರಹಗಳನ್ನು ಸಂಕೇತಗಳಾಗಿ ಬಳಸುತ್ತಿದ್ದರು. ಮುಂದೆ ಮಾರಿಯಸ್ (ಕ್ರಿ. ಪೂ. ಸು. 100) ಹದ್ದಿನ ವಿಗ್ರಹವೊಂದನ್ನು ಬಳಸುವಂತೆ ಆಜ್ಞೆ ಹೊರಡಿಸಿದ. ಚಿಹ್ನೆಯನ್ನು ಫ್ರಾನ್ಸಿನಲ್ಲಿ ಒಂದನೆಯ ನೆಪೋಲಿಯನ್ ಮತ್ತೆ ಬಳಸಿದ. 

	ರೋಮನರ ಅಶ್ವಸೈನ್ಯಗಳ ಧ್ವಜ ಆಧುನಿಕ ಧ್ವಜಕ್ಕೆ ಹತ್ತಿರವಾಗಿತ್ತೆನ್ನಬಹುದು. ಅದು ಭರ್ಜಿಯ ಕೊನೆಗೆ ಶಿಲುಬೆಯಾಕಾರದಲ್ಲಿ ಕಟ್ಟಿದ ಅಡ್ಡಪಟ್ಟಿಗೆ ಸಿಕ್ಕಿಸಿದ ಚಚ್ಚೌಕ ಬಟ್ಟೆಯ ತುಂಡು ಆಗಿತ್ತು. ಎನ್ನುವುದು ರೋಮನರ ನಾಣ್ಯ, ಬಿಲ್ಲೆ ಮತ್ತು ಶಿಲ್ಪಗಳಿಂದ ಸ್ಪಷ್ಟವಾಗುತ್ತದೆ. ರೋಮನ್ ಚಕ್ರವರ್ತಿಗಳ ಧ್ವಜಗಳು ಇದೇ ನಮೂನೆಯವಾಗಿದ್ದವು. ಅವು ಆಕಾರದಲ್ಲಿ ದೊಡ್ಡವು ಬಂಗಾರದ ಕಸೂತಿ ಬಿಡಿಸಿದ ರೇಷ್ಮೆಯವಾಗಿದ್ದವು. ರೋಮನರ ಶಿಲೆಬೆ ಧ್ವಜ ಕ್ರೈಸ್ತರಿಗೆ ಹಿಡಿಸಿತು. ಕಾನ್ಸ್ಟಂಟೈನ್ ಚಕ್ರವರ್ತಿ (280 ?-337) ಕ್ರೈಸ್ತಮತಕ್ಕೆ ಸೇರಿದಂದಿನಿಂದ ಈ ಧ್ವಜಕ್ಕೆ  ಹೆಚ್ಚಿನ ಮಹತ್ತ್ವ ಬಂತು. ಅದರ ಮೇಲೆ ಧಾರ್ಮಿಕ ಚಿಹ್ನೆಗಳು ತಲೆದೋರ ತೊಡಗಿದವು. ಇದೇ ಮುಂದೆ ವ್ಯತ್ಯಾಸಗೊಂಡು ಕ್ರೈಸ್ತರ ಧಾರ್ಮಿಕ ಧ್ವಜವಾಗಿ ಧಾರ್ಮಿಕ ವ್ರತಾಚರಣೆಯಲ್ಲಿ ಬಳಕೆಗೆ ಬರತೊಡಗಿತು. ಮಧ್ಯಯುಗದ ಧರ್ಮ ಸಂಬಂಧದ ದಂಡೆಯಾತ್ರೆಗಳಲ್ಲಿ ಇದೇ ನಮೂನೆಯ ಧ್ವಜಗಳ ಉಪಯೋಗವಾಗುತ್ತಿತ್ತು. ವಾಯುವ್ಯ ಫ್ರಾನ್ಸಿನ ಅಂಜೂ ಪ್ರದೇಶದ ಧ್ವಜ ಬಹುಶಃ ಇದೇ ಮಾದರಿಯದು. 507ರಲ್ಲಿ ಫ್ರಾಂಕರ ದೊರೆ ಕ್ಲೋವೀಸ್ ಅದನ್ನು ಯುದ್ಧಕ್ಕೆ ಒಯ್ದಿದ್ದನೆಂದು ಷಾರ್ಲ್‍ಮಾನ್ ಅದರ ಕೆಳಗೆ  ಹೋರಾಡಿದನೆಂದೂ ಊಹೆಯಿದೆ.  ಅದೇ ಧ್ವಜವನ್ನು ಫ್ರಾನ್ಸಿನ ಅರಸರು ಉಪಯೋಗಿಸುತ್ತಿದ್ದರು. 1124ರಲ್ಲಿ 6ನೆಯ ಲೂಯಿ ಹೊಸ ಧ್ವಜವೊಂದನ್ನು ಉಪಯೋಗಿಸತೊಡಗಿದಂದಿನಿಂದ ಅದರ ಬಳಕೆ ನಿಂತಿತು.

	ಪೌರಸ್ತ್ಯ ಧ್ವಜಗಳು: ಆಧುನಿಕ ಧ್ವಜ ಭಾರತೀಯರ ಇಲ್ಲವೇ ಚೀನಿಯರ ಶೋಧವೆಂದು ಹೇಳಲಾಗಿದೆ. ಯುರೋಪಿನಲ್ಲಿ  ಲೋಹದ ಲಾಂಛನಗಳು  ಬಳಕೆಯಲ್ಲಿದ್ದ ಕಾಲದಲ್ಲಿ ಚೀನಿಯರು ಬಟ್ಟೆಗಳ ಧ್ವಜಗಳನ್ನೂ ಬಳಸುತ್ತಿದ್ದರು. ಚೀನದಲ್ಲಿ (ಕ್ರಿ. ಪೂ. 1122) ಚೌ ರಾಜವಂಶದ ಮೊದಲಿಗನ ಎದುರಿಗೆ ಒಂದು ಬಿಳಿಯ ಧ್ವಜವನ್ನು  ಹಿಡಿಯಲಾಗುತ್ತಿತ್ತು.  660ರಲ್ಲಿ ರಾಜಕುಮಾರನೊಬ್ಬ ತನ್ನ ಪ್ರಭುವಿನೆದುರಿನಲ್ಲಿ ಧ್ವಜವನ್ನು ಇಳಿಸಿದ ಕಾರಣ ಶಿಕ್ಷೆಗೆ ಒಳಗಾಗಿದ್ದ. ಚೀನೀಯರ ಧ್ವಜಗಳ ಮೇಲೆ ಕೆಂಪು ಹಕ್ಕಿ, ಬಿಳಿ ಹುಲಿ ಇಲ್ಲವೇ ನೀಲಿ ಡ್ರೇಗನ್ನಿನ ನಕ್ಷೆಗಳಿರುತ್ತಿದ್ದುವು. ಅವನ್ನು ರಥದ ಮೇಲೆ ಒಯ್ಯಲಾಗುತ್ತಿತ್ತು. ಗೆದ್ದು ಕೊಂಡ ನಗರಗಳ ಗೋಡೆಗಳ ಮೇಲೆ ಅವನ್ನು ಏರಿಸುತ್ತಿದ್ದರು.  ರಾಜನ ಪ್ರತೀಕವೆಂಬ ಕಾರಣದಿಂದ ಅದಕ್ಕೆ ರಾಜನಿಗೆ ಸಲ್ಲುವ ಮಾನಮರ್ಯಾದೆಗಳು ದೊರಕುತ್ತಿದ್ದುವು. ಧ್ವಜದ ಪತನವನ್ನು ಸೋಲೆಂದು ತಿಳಿಯುತ್ತಿದ್ದರು. ಇದರಿಂದಾಗಿ ರಾಜನ ಧ್ವಜ ಅವನೊಂದಿಗಿರದೆ ಅದನ್ನು ಸೇನಾಪತಿಗೆ ಒಪ್ಪಿಸಲಾಗುತ್ತಿತ್ತು.

ಭಾರತದಲ್ಲಿ ಧ್ವಜದ ಉಗಮವನ್ನು ಕುರಿತ ಅನೇಕ ವಿಚಾರಗಳಿವೆ. ಅತಿ ಪುರಾತನ ಕಾಲದ ಧ್ವಜಗಳು ಬಹುತೇಕ ಕೆಂಪು ವರ್ಣದವಾಗಿರುತ್ತಿದ್ದವು. ಇದು ಯಜ್ಞಪಶುವಿನ ರಕ್ತದ ಸಂಕೇತವಾಗಿರಬೇಕು. ಇದು ಮಾತೃದೇವತೆಯ ಮುಟ್ಟಿನ ರಕ್ತದ ಸಂಕೇತವಾಗಿತ್ತೆಂಬ ತರ್ಕವೂ ಇದೆ. 

ಧ್ವಜಕ್ಕೆ ಪವಿತ್ರ ಪತಾಕೆ ಎಂಬ ಅರ್ಥವಿತ್ತು. ಋಗ್ವೇದದಲ್ಲಿ ಅದರ ಪ್ರಸ್ತಾಪವಿದೆ. ಅಥರ್ವ ವೇದದಲ್ಲಿ ಕೂಡ ಸೂರ್ಯದೇವತೆಯ ಲಾಂಛನವುಳ್ಳ ಧ್ವಜದ ಪ್ರಸ್ತಾಪವಿದೆ. ರಾಮಾಯಣ ಮಹಾಭಾರತ ಪುರಾಣಗಳಲ್ಲೂ ಧ್ವಜದ ಉಲ್ಲೇಖವಿದೆ. ಮಹಾವಿಷ್ಣುವಿಗೆ ಗರುಡ ಧ್ವಜ, ಗಂಗಾಧರನಿಗೆ ವೃಷಭಧ್ವಜ ಅಥವಾ ವೃಷಕೇತನ, ಮನ್ಮಥನಿಗೆ ಮೀನಕೇತನ ಎಂಬ ಹೆಸರುಗಳಿವೆ. ರಾಮ ಲಕ್ಷ್ಮಣರು ಕಾಡಿನಲ್ಲಿದ್ದಾಗ ಅಯೋಧ್ಯೆಯ ಸೈನ್ಯ ಬರುತ್ತಿದ್ದುದನ್ನು ದೂರದಿಂದ ಅದರ ಧ್ವಜವನ್ನು ನೋಡಿ ಅರಿತರು. ಭರತನಿಗೆ  ಮರದ ಗುರುತುಳ್ಳ ಧ್ವಜವಿತ್ತು. ಮಹಾಭಾರತದಲ್ಲಿ ತಾಮ್ರಧ್ವಜ, ಹಂಸಧ್ವಜ, ಮಯೂರಧ್ವಜರೆಂಬ ರಾಜರ ಪ್ರಸ್ತಾಪವಿದೆ. ದ್ರೋಣಪರ್ವದ ಒಂದು ಅಧ್ಯಾಯದಲ್ಲಿ ಕುರುಕ್ಷೇತ್ರದಲ್ಲಿ ಎದುರುಬದುರಾಗಿ ನಿಂತ ಸೇನೆಗಳ ನಾಯಕರ ಧ್ವಜಗಳ ವಿವರಣೆಯಿದೆ.  ವಿರಾಟಪರ್ವದಲ್ಲೂ ಭೀಷ್ಮಪರ್ವದ ಪ್ರಾರಂಭದಲ್ಲೂ ಬರುವ ಯುದ್ಧಭೂಮಿಯ ವರ್ಣನೆಯ ಪ್ರಕಾರ ಭೀಷ್ಮನಿಗೆ ಐದು ನಕ್ಷತ್ರಗಳ ಗುರುತುಳ್ಳ ತಾಳಧ್ವಜವಿತ್ತು.  ಸುಯೋಧನನಿಗೆ ಪನ್ನಗ, ಅರ್ಜುನನಿಗೆ ಕಪಿ, ಅಶ್ವತ್ಥಾಮನಿಗೆ ಬಂಗಾರದ ಕಿರಣಗಳೊಂದಿಗೆ ಸಿಂಹದ ಬಾಲ, ಕೃಪನಿಗೆ ವೃಷಭ, ಜಯದ್ರಥನಿಗೆ ವರಾಹ, ಭೀಮನಿಗೆ ಸಿಂಹ, ಭೃಗುವಿಗೆ ಮರ, ದ್ರೋಣನಿಗೆ ಕಮಂಡಲ, ಅಭಿಮನ್ಯುವಿಗೆ ಜಿಂಕೆ, ಘಟೋತ್ಕಚನಿಗೆ ಚಕ್ರ, ಯುಧಿಷ್ಠಿರನಿಗೆ ಚಂದ್ರ, ಕರ್ಣನಿಗೆ ಮೊಸಳೆ, ನಕುಲನಿಗೆ ಚಿಗರೆ, ಸಹದೇವನಿಗೆ ಹಂಸ ಮೊದಲಾದ ಗುರುತುಗಳುಳ್ಳ ಧ್ವಜಗಳಿದ್ದವು,  ಶಿವನಿಗೆ ನಂದಿ, ವಿಷ್ಣುವಿಗೆ ಗರುಡ, ಸುಬ್ರಹ್ಮಣ್ಯಿಗೆ ನವಿಲು, ಇಂದ್ರನಿಗೆ ಖಡ್ಗ ಈ ಸಂಕೇತಗಳುಳ್ಳ ಧ್ವಜಗಳಿವೆ.  ಮಹಾಭಾರತದಲ್ಲಿ ಪ್ರಸ್ತಾಪಿಸಲ್ಪಟ್ಟ ಧ್ವಜಗಳು ಸುವರ್ಣಧ್ವಜಗಳೆಂದೂ ರಜತಧ್ವಜಗಳೆಂದೂ ವರ್ಣಿತವಾಗಿವೆ.  ಕಾಲಕ್ರಮೇಣ ಧ್ವಜಗಳು ಚಿನ್ನಬೆಳ್ಳಿಗಳಿಗಿಂತ ಇತರ ಲೋಹಗಳಿಗೆ ಇಳಿದು ಮುಂದೆ ಬಣ್ಣದ ಹಲಗೆಗಳಾಗಿ ಈಗ ಸರ್ವತ್ರ ಬಳಕೆಯಾಗುವ ಕಾರಣದಿಂದ ಅನುಕೂಲ ದೃಷ್ಟಿಯಿಂದ ವಸ್ತ್ರವಾಗಿ ಪರಿಣಮಿಸಿದೆ.

ಪ್ರಾಚೀನ ಕಾಲದಲ್ಲಿ ಚಿಕ್ಕಪುಟ್ಟ ನಾಯಕರೂ ಸೇರಿದಂತೆ ಎಲ್ಲ ನಾಯಕರಿಗೂ ಧ್ವಜಗಳಿದ್ದವು.  ಅವುಗಳ ಮೇಲೆ ಹೆಚ್ಚಾಗಿ ನಾಯಕರು ಕುಲದೇವತೆಗಳ ನಕ್ಷೆಗಳಿರುತ್ತಿದ್ದವು.  ಎದುರು ಪಕ್ಷದವರು ಆ ಧ್ವಜಗಳ ಕಡೆಗೆ ಬಾಣಗಳನ್ನೆಸೆಯುತ್ತಿದ್ದರು.  ಚಿಕ್ಕಪುಟ್ಟ ಕಾಳಗಗಳಲ್ಲಿ ಧ್ವಜಗಳಿಗೆ ಆದ ಇರಿತಗಳಿಂದ ಜಯವನ್ನು ನಿರ್ಧರಿಸಲಾಗುತ್ತಿತ್ತು.  ಒಂದು ಸೈನ್ಯ ಯುದ್ಧಕ್ಕೆ ಹೊರಟಾಗ ಅದರೊಂದಿಗೆ ಅಸಂಖ್ಯಾತ ಧ್ವಜಗಳೂ ಹೊರಡುತ್ತಿದ್ದವು.  ಯುದ್ಧರಂಗದಲ್ಲಿ ಧ್ವಜಗಳನ್ನು ಎತ್ತಿ ಹಿಡಿಯುತ್ತಿದ್ದರು. ರಥಗಳ ಮೇಲೆ, ಆನೆಗಳ ಅಂಬಾರಿಗಳ ಮೇಲೆ ಧ್ವಜಗಳಿರುತ್ತಿದ್ದುವು.  ಯುದ್ಧದಲ್ಲಿ ಸೋತವರ ಧ್ವಜಗಳನ್ನು ಸಂಗ್ರಹಿಸಿಕೊಂಡುಬರುವ ಸಂಪ್ರದಾಯವಿತ್ತು.  ನಾಯಕನ ಧ್ವಜದ ಪತನ ಅನೇಕ ಸಲ ಸೋಲಿಗೆ ಕಾರಣವಾಗುತ್ತಿತ್ತು.  ಬೇಗೂರಿನ ವೀರಗಲ್ಲಿನ ಮೇಲ್ಭಾಗದಲ್ಲಿ ಒಂದು ದೊಡ್ಡ ಧ್ವಜ ಹಾರಾಡುತ್ತಿರುವಂತೆ ಚಿತ್ರಿಸಿದ.  ಅದರ ಕೆಳಗೆ ಒಬ್ಬ ಸ್ತ್ರೀ ನಿಂತಿದ್ದಾಳೆ.  ಅದು ರಾಜನ ಏಕಚ್ಛತ್ರದ ಕೆಳಗೆ ರಾಜಲಕ್ಷ್ಮಿ ನಿಂತಿರುವುದು ಸಂಕೇತವೆಂದು ಊಹಿಸಲಾಗಿದೆ. 

ಪ್ರಾಚೀನ ಕಾಲದ ಧ್ವಜಗಳು ಹೆಚ್ಚಾಗಿ ತ್ರಿಕೋಣಾಕೃತಿಯವಾಗಿದ್ದವು. ಅವುಗಳಲ್ಲಿ ಕೆಂಪು ಇಲ್ಲವೇ ಹಸಿರು ಬಣ್ಣ ಇರುತ್ತಿತ್ತು. ಅವುಗಳ ಮೇಲೆ ಬಂಗಾರದಿಂದ ಚಿತ್ರಗಳನ್ನು ಹೆಣೆಯುತ್ತಿದ್ದರು. ಅವಕ್ಕೆ ಬಂಗಾರದ ಅಂಚುಗಳಿರುತ್ತಿದ್ದವು.  ಅನೇಕ ಸಲ ಧ್ವಜದ ಮೇಲಿನ ಚಿತ್ರಗಳು ಇಲ್ಲವೇ ನಕ್ಷೆಗಳು ಧ್ವಜದಂಡಗಳ ತುದಿಗೂ ಇರುತ್ತಿದ್ದವು. ಭಾರತದ ಮತ್ತು ಚೀನದ ಧ್ವಜಗಳಿಗೆ ಪುರಾತನ ಈಜಿಪ್ಟಿನ ಮತ್ತು ಅಸ್ಸಿರಿಯದ ಧ್ವಜಗಳು ಮೂಲವೆಂದು ಹೇಳುವವರ ವಾದಕ್ಕೆ ಇದು ಪುಷ್ಟಿ ಕೊಡುತ್ತದೆ.  ಭಾರತದಲ್ಲಿ ಆಳಿದ ಬೇರೆ ಬೇರೆ ರಾಜವಂಶಗಳಿಗೆ ಬೇರೆ ಬೇರೆ ಧ್ವಜಗಳಿದ್ದುವು.  ಚಾಳುಕ್ಯರು ವರಾಹಧ್ವಜವನ್ನೂ, ರಾಷ್ಟ್ರಕೂಟರು ಗರುಡಧ್ವಜವನ್ನೂ ಕದಂಬರು ಸಿಂಹಧ್ವಜವನ್ನೂ ಕಳಚುರಿಗಳು ವೃಷಭಧ್ವಜವನ್ನೂ ಹೊಯ್ಸಳರು ಹೊಯ್ಸಳಧ್ವಜವನ್ನೂ ವಿಜಯನಗರದ ಅರಸರು ಮಹಾ ವರಾಹಧ್ವಜವನ್ನೂ ಹೊಂದಿದ್ದರು.  ಮೊಗಲ್ ಅರಸರ ಲಾಂಛನದಲ್ಲಿ ಧ್ವಜಗಳೊಂದಿಗೆ ಛತ್ರಚಾಮರಗಳೂ ಸೇರಿದ್ದವು.  ಪ್ರಾಚೀನ ಕಾಲದಲ್ಲಿ ಧ್ವಜವನ್ನು ಪ್ರಾಧಿಕಾರದ ಸಂಕೇತದಂತೆಯೂ ಉಪಯೋಗಿಸುತ್ತಿದ್ದರು.  ಉದಾ: ಮೌರ್ಯರ ಕಾಲದಲ್ಲಿ ರಾಜನ ಅನುಮತಿಯಿಲ್ಲದೆ ಯಾರೂ ಮದ್ಯವನ್ನು ಮಾರುವಂತಿರಲಿಲ್ಲ.  ಹಾಗೆ ಅನುಮತಿ ಪಡೆದುಕೊಂಡ ವ್ಯಾಪಾರಿ ತನಗೆ ಅನುಮತಿ ದೊರಕಿರುವುದನ್ನು ಸೂಚಿಸುವುದಕ್ಕೆ ಒಂದು ವಿಶಿಷ್ಟ ಧ್ವಜವನ್ನು ತೂಗುಹಾಕುತ್ತಿದ್ದ.  ಭಾರತ, ಚೀನಗಳಲ್ಲಿ ಸಂಜ್ಞೆಗಳನ್ನು ಮಾಡುವುದಕ್ಕೂ ಧ್ವಜಗಳ ಉಪಯೋಗವಾಗುತ್ತಿತ್ತು.  1542 ರಲ್ಲಿ ಯುದ್ಧವಿರಾಮವನ್ನು ಸೂಚಿಸುವುದಕ್ಕಾಗಿ ಬಿಳಿಯ ಧ್ವಜವನ್ನು ಬಳಸಿದ ಉದಾಹರಣೆಯಿದೆ.  ಧ್ವಜಗಳ ಉಪಯೋಗ ಭಾರತ ಮತ್ತು ಚೀನ ದೇಶಗಳಿಂದ ಬರ್ಮ, ಸೈಯಾಮ್ ಮತ್ತು ಇತರ ನೆರೆ ದೇಶಗಳಿಗೆ ಹಬ್ಬಿತು.  ಆ ದೇಶಗಳಲ್ಲಿ ಆನೆ, ಎತ್ತು, ನೀರಹಕ್ಕಿ ಮೊದಲಾದವನ್ನು ಬಿಡಿಸಿದ ಬಿಳಿಯ, ಹಳದಿಯ ಇಲ್ಲವೇ ಕಪ್ಪು ಧ್ವಜಗಳು ಬಳಕೆಯಲ್ಲಿ ಬಂದುವೆಂದು ತಿಳಿದುಬರುತ್ತದೆ. ಪಡೆಗಳು ಮುಂದುವರಿಯತೊಡಗಿದೊಡನೆ ಧ್ವಜಗಳನ್ನು ಬಿಚ್ಚಿ ಹರಡುತ್ತಿದ್ದರೆಂದು ಸೈಯಾಮಿನ ಯುದ್ಧ ಪ್ರಬಂಧವೊಂದರಲ್ಲಿ ಉಲ್ಲೇಖವಿದೆ.  

ಧ್ವಜಗಳು ಪೂರ್ವ ದೇಶಗಳಿಂದ ಸಾರಾಸೆನರ (ಅರಬರು) ಮುಖಾಂತರ ಯುರೋಪಿಗೆ ಹೋಗಿರಬೇಕು.  ಆದರೆ ಮೂರ್ತಿವಿರೋಧಿಯಾದ ಇಸ್ಲಾಮಿನ ಪ್ರಭಾವ ಅವುಗಳ ರಚನೆಯ ಮೇಲೆ ಬಿದ್ದಿತ್ತು.  ಮುಸ್ಲಿಮರ ಧ್ವಜಗಳು ಅತ್ಯಂತ ಸರಳವಾಗಿದ್ದು ಕಪ್ಪು, ಬಿಳುಪು ಇಲ್ಲವೇ ಕೆಂಪು ವರ್ಣದವಾಗಿದ್ದುವು.  ಅಬ್ಬಾಸಿದರು ಕಪ್ಪು ಧ್ವಜವನ್ನೂ (ಸು. 746 ) ಉಮಯ್ಯದ್ ಖಲೀಫರು ಮತ್ತು ಆಲಿಡರು ಬಿಳಿಯ ಧ್ವಜವನ್ನೂ ಖಾವರಿಜರು ಕೆಂಪು ಧ್ವಜವನ್ನೂ ಬಳಸುತ್ತಿದ್ದರು.  ಮಸ್ಕಾಟ್ ಮತ್ತು ಒಮ್ರಾನ್ ಸುಲ್ತಾನರು ಸಾದಾ ಕೆಂಪು ಧ್ವಜವನ್ನು ಆರಿಸಿಕೊಂಡರು.  ಹಸಿರು ಫಾತಿಮೈಡ್ ರಾಜವಂಶದ ವರ್ಣವಾಗಿದ್ದು ಕೊನೆಗೆ ಇಸ್ಲಾಮಿನ ಸಾಂಕೇತಿಕ ಬಣ್ಣವಾಯಿತು.  ಊಸ್ಮಾನ್ಲಿ ತುರ್ಕಿಗಳು 1250 ರ ಸುಮಾರಿಗೆ ಕ್ರಿ. ಪೂ. 9 ನೆಯ ಶತಮಾನದಲ್ಲಿ ಅಸ್ಸಿರಿಯನರು ಬಳಸುತ್ತಿದ್ದ ಬಾಲಚಂದ್ರ ಚಿಹ್ನೆಯನ್ನು ಧ್ವಜಗಳಲ್ಲಿ ಸೇರಿಸಿಕೊಂಡರು.  ಅಂದಿನಿಂದ ಬಾಲಚಂದ್ರ (ತಾರೆ ಇಲ್ಲವೇ ತಾರೆಗಳೊಂದಿಗೆ ಅಥವಾ ಅವಿಲ್ಲದೆ) ಇಸ್ಲಾಮಿನ ಚಿಹ್ನೆಯಾಗಿದೆ.  ಅದು ಹಸಿರು, ಕೆಂಪು ಇಲ್ಲವೇ ಕಪ್ಪುಬಣ್ಣದ ಹಿನ್ನೆಲೆಯಲ್ಲಿ ಈಜಿಪ್ಟ್, ತುರ್ಕಿ, ಟ್ಯೂನೀಷಿಯ, ಲಿಬಿಯ, ಪಾಕಿಸ್ತಾನ ಮತ್ತು ಕೆಲವು ಪೂರ್ವ ರಾಷ್ಟ್ರಗಳ ಧ್ವಜಗಳಲ್ಲಿ ಬಿಳಿಯ ಬಣ್ಣಲ್ಲಿರುತ್ತದೆ.

ರೂಪಗಳು ಮತ್ತು ಉದ್ದೇಶಗಳು :  ಪಾಶ್ಚಾತ್ಯ ದೇಶಗಳಲ್ಲಿ ಧ್ವಜಗಳನ್ನು ಅವುಗಳ ಆಕಾರ ಮತ್ತು ಉದ್ದೇಶಗಳಿಗನುಸಾರವಾಗಿ ಸ್ಟ್ಯಾಂಡರ್ಡ್, ಬ್ಯಾನರ್, ಗೈಡನ್, ಪೆನನ್ ಮತ್ತು ಸ್ಟ್ರೀಮರ್‍ಗಳೆಂದು ವಿಭಾಗಿಸಲಾಗಿತ್ತು.  ಇವುಗಳ ಹೊರತಾಗಿ ವೈಯಕ್ತಿಕ ಮನೆತನದ ಮತ್ತು ಸ್ಥಳಿಕ ಸೂಚಿತಾರ್ಥದ ಮತ್ತು ಸಾಮಾನ್ಯವಾಗಿ ಹೆಚ್ಚು ತೊಡಕಿನ ಚಿತ್ರಾಲಂಕಾರಗಳಿಂದ ಇನ್ನೂ ಅನೇಕ ಧ್ವಜಗಳೂ ಬಳಕೆಯಲ್ಲಿ ಇದ್ದವು.  ಸ್ಟ್ಯಾಂಡರ್ಡ್‍ನ್ನು ರಾಜರು, ಕುಲೀನ ವರ್ಗದವರು ಬಳಸುತ್ತಿದ್ದರು.  ಅದರ ಮೇಲೆ ವೈಯಕ್ತಿಕ ಲಾಂಛನವಿರುತ್ತಿತ್ತು.  ಉಳಿದೆಲ್ಲ ಧ್ವಜಗಳಿಗಿಂತ ದೊಡ್ಡದಾಗಿದ್ದು ಅದನ್ನು ಒಂದೇ ಸ್ಥಳದಿಂದ ಹಾರಿಸಲಾಗುತ್ತಿತ್ತು.  ಅದು ಉದ್ದವಾಗಿದ್ದು ಹಾರುವ ಕಡೆಗೆ ಚೂಪಾಗುತ್ತ ಹೋಗಿ ಎರಡು ಮೊನೆಗಳಲ್ಲಿ ಅಂತ್ಯಗೊಳ್ಳುತ್ತಿತ್ತು.  ವ್ಯಕ್ತಿ ಆ ಸ್ಥಳದಲ್ಲಿ ಇರುವುದನ್ನು ಸೂಚಿಸುವುದು ಅದರ ಉದ್ದೇಶವಾಗಿತ್ತು.  ಉದಾಹರಣೆಗಾಗಿ ಅರಮನೆ, ಕೋಟೆ, ವಂದನೆಯ ಸ್ವೀಕಾರದ ಸ್ಥಳ, ಡೇರೆ ಇಲ್ಲವೇ ಹಡಗು ಮುಂತಾಗಿ ರಾಜ ಎಲ್ಲಿರುತ್ತಿದ್ದನೋ ಅಲ್ಲಿಂದ ಅದನ್ನು ಹಾರಿಸುತ್ತಿದ್ದರು.  ರಾಜನಿಂದ ನೈಟ್ ಬ್ಯಾರನೈಟ್ ವರೆಗಿನ ಎಲ್ಲ ಕುಲೀನ ವರ್ಗದವರೂ ಯುದ್ಧದಲ್ಲಿ ಉಪಯೋಗಿಸುವಂಥದು ಬ್ಯಾನರ್ ಆಗಿತ್ತು.  ಅದು ಆಕಾರದಲ್ಲಿ ಚಚ್ಚೌಕವಾಗಿ ಇಲ್ಲವೇ ಆಯತವಾಗಿದ್ದು ಅದರ ಮೇಲೆ ವೈಯಕ್ತಿಕ ಇಲ್ಲವೇ ಮನೆತನದ ಲಾಂಛನವಿರುತ್ತಿತ್ತು. ಸರದಾರರಿಗಿಂತ ಕೆಳಗಿನ ದರ್ಜೆಯವರು ಯುದ್ಧಕ್ಕೆ ಒಯ್ಯುತ್ತಿದ್ದ ಧ್ವಜ ಗೈಡನ್. ಅದು ಆಕಾರದಲ್ಲಿ ಸ್ಟ್ಯಾಂಡರ್ಡಿನಂತೆಯೇ ಇದ್ದು ಅದರ ಹಾರುವ ಬದಿ ದುಂಡಗಿರುತ್ತಿತ್ತು; ಇಲ್ಲವೆ ದುಂಡಗಿರುವ ಎರಡು ಸ್ಯಾಲೋ ಹಕ್ಕಿಗಳ ಬಾಲಗಳೋಪಾದಿಯಲ್ಲಿರುತ್ತಿತ್ತು.  ಸೆನನ್ ಎಂಬ ಚಿಕ್ಕ ತ್ರಿಕೋಣಾಕೃತಿಯ ಧ್ವಜವನ್ನು ಪ್ರತಿಯೊಬ್ಬ ಸರದಾರನೂ ತನ್ನ ಭಲ್ಲೆಯ ತುದಿಗೆ ಹಿಡಿಯುತ್ತಿದ್ದ.  ಟ್ರಕ್ಕುಗಳಿಗೆ ಸಿಕ್ಕಿಸುವ ಕೆಂಪು ಧ್ವಜದಂತೆ, ಅಪಘಾತವನ್ನು ತಪ್ಪಿಸುವುದು ಈ ಧ್ವಜದ ಉದ್ದೇಶಗಳಲ್ಲೊಂದಾಗಿತ್ತು.  ದರ್ಜೆಯನ್ನು ಸೂಚಿಸುವುದು, ವೈರಿಗಳಲ್ಲಿ ಭಯವನ್ನು ಹುಟ್ಟಿಸುವುದು ಇವೂ ಇದರ ಉದ್ದೇಶಗಳಾಗಿದ್ದುವು.  ಈಗ ಪೆಂಡಂಟ್ ಇಲ್ಲವೇ ಪೆನ್ನಂಟ್ ಎಂದು ಕರೆಯಲಾಗುವ ಸ್ಟ್ರೀಮರ್ 20 ರಿಂದ 60 ಗಜಗಳವರೆಗೆ ಉದ್ದವಾಗಿರುತ್ತಿತ್ತು.  ಕಟ್ಟುವ ಬದಿಯಲ್ಲಿ ಅದು 8 ಗಜ ಅಗಲವಿತ್ತು; ಎರಡು ಮೊನೆಗಳಲ್ಲಿ ಅಂತ್ಯವಾಗುತ್ತಿತ್ತು.  ಅದರ ಆಕಾರದಿಂದಾಗಿ ಅದನ್ನು ಸಮುದ್ರದಲ್ಲಷ್ಟೇ ಬಳಸಲಾಗುತ್ತಿತ್ತು.  ಬ್ರಿಟಿಷ್ ನೌಕಾಪಡೆ ಸ್ತಂಭದ ಕಡೆಗೆ ಸೇಂಟ್ ಚಾರ್ಜನ ಶಿಲುಬೆಯ ಚಿಹ್ನೆಯಿರುವ ಬಿಳಿಯ ಪೆನ್ನಂಟನ್ನು ಬಳಸುತ್ತಿದೆ.  ಯುದ್ಧ ಸನ್ನದ್ಧವಾಗಿರುವ ನೌಕೆಯ  ಸಂಕೇತವಾದ ಈ ಧ್ವಜವನ್ನು ಕಪ್ತಾನ ಅಧಿಕಾರ ವಹಿಸಿಕೊಂಡ ಅನಂತರ ಹಾರಿಸುತ್ತಾರೆ.  ಬ್ರಿಟನಿನಲ್ಲಿ ರಾಜರ ಅಂಗರಕ್ಷಕ ದಳಗಳೂ ರಾವುತ ರಕ್ಷಕ ಪಡೆಗಳೂ ಸ್ಟ್ಯಾಂಡರ್ಡನ್ನು ಬಳಸುತ್ತಿದ್ದುವು.  ಹುಸ್ಸಾರ್ (ಲಘು ಆಯುಧಗಳನ್ನು ಧರಿಸಿದ ರಾವುತು ಮತ್ತು ಲ್ಯಾನ್ಸರ್ (ಭಲ್ಲೆಯಕಾರ) ಪಡೆಗಳಿಗೆ ಧ್ವಜಗಳು ಇರಲಿಲ್ಲ.  ಅಶ್ವದಳ (ಡ್ರ್ಯಾಗೂನ್) ಗೂಡನ್‍ಗಳನ್ನು ಬಳಸುತ್ತದೆ.  

ನಿಸ್ತಂತು ಪ್ರಸಾರದ ಶೋಧನೆಯ ಪೂರ್ವದಲ್ಲಿ ಧ್ವಜಗಳು ಸಂದೇಶಗಳನ್ನು ಕಳಿಸುವ ಪ್ರಮುಖ ಸಾಧನಗಳಾಗಿದ್ದವು.  ಈಗಲೂ ಉಳಿದುಕೊಂಡಿರುವ ಧ್ವಜದ ಔಪಯೋಗಿಕ ರೂಢಿಗಳು ಇದಕ್ಕೆ ಸಾಕ್ಷಿ.  ಅರ್ಧ ಮಟ್ಟದಲ್ಲಿ ಧ್ವಜ ಇರುವುದು ಶೋಕಸೂಚಕ.  ಕರಿಯ ಧ್ವಜ ಪ್ರತಿಭಟನೆಯನ್ನು ಸೂಚಿಸುತ್ತದೆ.  ತಲೆ ಕೆಳಗಾಗಿ ಹಾರುವ ಧ್ವಜ ಅಪಾಯ ಸ್ಥಿತಿಯ ಗುರುತು.  ಬಿಳಿಯ ಧ್ವಜ ಶರಣಾಗತಿಯ ಚಿಹ್ನೆ. ವಂದನೆ ಸಲ್ಲಿಸುವುದಕ್ಕೆ, ಗೌರವ ತೋರಿಸುವುದಕ್ಕೆ ಧ್ವಜವನ್ನು ಬಾಗಿಸುತ್ತಾರೆ. ಕೆಂಪು ಧ್ವಜ ಬಂಡಾಯದ ಸಂಕೇತ. ಹಳದಿ ಧ್ವಜ ಸಂಪರ್ಕ ನಿಷೇಧವನ್ನು ಸೂಚಿಸುತ್ತದೆ.  

ಬ್ರಿಟನ್ ಹಡಗುಗಳು ಬಳಸುವ, ಮಧ್ಯದಲ್ಲಿ ಬಿಳಿಯ ಚೌಕವಿರುವ ನೀಲಿ ಆಯತ ಧ್ವಜ (ಬ್ಲೂ ಪೀಟರ್), ಪ್ರಯಾಣಕ್ಕೆ ಹಡಗು ಸಿದ್ಧವಾಗಿದೆಯೆಂಬುದನ್ನು ಸೂಚಿಸುತ್ತದೆ.  ಅರ್ಧ ಕೆಂಪು ಅರ್ಧ ಬಿಳುಪು ಇರುವ ಧ್ವಜ, ಚಾಲಕ ತನ್ನ ಸ್ಥಾನದಲ್ಲಿದ್ದಾನೆನ್ನುವುದನ್ನು ಸೂಚಿಸುತ್ತದೆ.

ಅನೇಕ ಸಂದರ್ಭಗಳಲ್ಲಿ ಕೆಂಪು ಧ್ವಜ ಅಪಾಯಸೂಚಕ, ಮುಂದಿನ ದಾರಿ ಸುಗಮವಾಗಿದೆಯೆಂಬುದನ್ನು ಹಸಿರು ಸೂಚಿಸುತ್ತದೆ.  ರೈಲ್ವೆಗಳು ಕೆಂಪು ಹಸಿರು ಧ್ವಜಗಳನ್ನು ಈ ಅರ್ಥದಲ್ಲಿ ಬಳಸುತ್ತವೆ.  

ಕಮ್ಯೂನಿಸ್ಟ್ ದೇಶಗಳು :  ಕಮ್ಯೂನಿಸ್ಟ್ ರಾಷ್ಟ್ರಗಳು ಸಾಮಾನ್ಯವಾಗಿ ಕೆಂಪು ಧ್ವಜಗಳನ್ನು ಬಳಸುತ್ತವೆ.  ಚೀನದ ಧ್ವಜದಲ್ಲಿ ಆಯಾಕಾರದ ಕೆಂಪು ಕ್ಷೇತ್ರದ ಮೇಲೆ ಸ್ತಂಭಕ್ಕೆ ಹತ್ತಿರವಾಗಿ ಮೇಲ್ಗಡೆಯಲ್ಲಿ ಐದು ಮೊನೆಗಳ ದೊಡ್ಡ ಹಳದಿ ನಕ್ಷತ್ರ, ಅದರ ಎದುರಿನಲ್ಲಿ ಬಾಲಚಂದ್ರಾಕೃತಿಯಲ್ಲಿ 5 ಮೊನೆಗಳ ನಾಲ್ಕು ನಕ್ಷತ್ರಗಳು ಇರುತ್ತವೆ.  ಸೋವಿಯತ್ ದೇಶದ ಧ್ವಜವೂ ಕೆಂಪು.  ಆಯಾಕಾರದ ಧ್ವಜದ ಮೇಲೆ ಸ್ತಂಭಕ್ಕೆ ಹತ್ತಿರವಾಗಿ ಮೇಲ್ಗಡೆಯಲ್ಲಿ ಹಳದಿ ಬಣ್ಣದಲ್ಲಿ ಕುಡುಗೋಲು ಮತ್ತು ಸುತ್ತಿಗೆಯ ಚಿತ್ರಗಳಿವೆ.  ಅದರ ಮೇಲೆ ಹಳದಿ ಅಂಚಿರುವ 5 ಮೊನೆಗಳ ಕೆಂಪು ನಕ್ಷತ್ರ ಇದೆ.  

ಯೂನಿಯನ್ ಜ್ಯಾಕ್:  ಬ್ರಿಟನ್ನಿನ ರಾಷ್ಟ್ರಧ್ವಜ ಯೂನಿಯನ್ ಜ್ಯಾಕ್. 1 ನೆಯ ಜೇಮ್ಸ್ ದೊರೆಯ ಕಾಲದಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಒಂದಾದ ಅನಂತರ 1606 ರಲ್ಲಿ ಇದು ಬಳಕೆಯಲ್ಲಿ ಬಂತು. ಆಗ ಅದರ ಮೇಲೆ ಸೇಂಟ್ ಜಾರ್ಜ್ ಮತ್ತು ಸೇಂಟ್ ಆಂಡ್ರೂ ಶಿಲುಬೆಗಳಿದ್ದವು.  ಅದನ್ನು ದೊರೆ ಯುದ್ಧನೌಕೆಯ ಹೊರತಾಗಿ ಉಳಿದೆಲ್ಲ ಬ್ರಿಟಿಷ್ ಹಡಗುಗಳ ಕೆಳಗಿನ ಮುಖ್ಯ ಕೂವೆಗಳ ಮೇಲಿನ ವೇದಿಕೆಗಳಿಂದ ಹಾರಿಸುವಂತೆ ಆಜ್ಞೆ ಮಾಡಿದ.  ಯುದ್ಧನೌಕೆಗಳಲ್ಲಿ ಅದನ್ನು ಮೂತಿ ಮರದ ತುದಿಗೆ ಸ್ತಂಭದಿಂದ (ಜ್ಯಾಕ್ ಸ್ಟಾಫ್) ಹಾರಿಸುತ್ತಿದ್ದರು.  ಆದುದರಿಂದ ಈ ಧ್ವಜಕ್ಕೆ ಯೂನಿಯನ್ ಜ್ಯಾಕ್ ಎಂಬ ಹೆಸರು ಬಂತು.  ಮುಂದೆ ಐರ್ಲೆಂಡಿನ ಸೇರುವಿಕೆಯ ಅನಂತರ 1801 ರಲ್ಲಿ ಸೇಂಟ್ ಪ್ಯಾಟ್ರಿಕ್ಕನ ಶಿಲುಬೆಯನ್ನೂ ಸೇರಿಸಲಾಯಿತು.  ಹೀಗೆ ಬ್ರಿಟನ್ನಿನ ರಾಷ್ಟ್ರಧ್ವಜ ರೂಪುಗೊಂಡಿತು.  

ಈ ಧ್ವಜವನ್ನು ಎರಡು ವಿಧಗಳಲ್ಲಿ ಬಳಸಬಹುದು.  ಮೊದಲನೆಯದಾಗಿ ಅದನ್ನಷ್ಟೇ ಹಾರಿಸಬಹುದು.  ಎರಡನೆಯದಾಗಿ ಅದನ್ನು ಇನ್ನೊಂದು ಧ್ವಜದಲ್ಲಿ ಸೇರಿಸಿ ಹಾರಿಸಬಹುದು.  ಸಮುದ್ರದಲ್ಲಿ ರಾಜನೌಕೆಯ ಮುಖ್ಯ ಕೂವೆಯ ಮೇಲೆ ಹಾರುತ್ತಿದ್ದರೆ ಅದು ನೌಬಲಾಧಿಪತಿಯ ಧ್ವಜ, ಮೂತಿ ಮರದಿಂದ ಹಾರುತ್ತಿದ್ದರೆ ಅದು ಯುದ್ಧ ನೌಕೆಯನ್ನು ಸೂಚಿಸುತ್ತದೆ.  ಸಮುದ್ರದಲ್ಲಿ ಅದನ್ನು ಇನ್ನಾವುದೇ ರೀತಿಯಲ್ಲಿ ಬಳಸಬಾರದು.  ಹಾಗೆ ಮಾಡಿದರೆ ಭಾರಿ ಜುಲ್ಮಾನೆಗೆ ಗುರಿಯಾಗಬೇಕಾಗುತ್ತದೆ.  ಕೋಟೆಗಳ ಮತ್ತು ಸೈನಿಕ ಕೇಂದ್ರ ಸ್ಥಳಗಳ  ಮೇಲೆಯೂ ಅದನ್ನು ಹಾರಿಸಬಹುದು.  ಅನೇಕ ಸಲ ಕೇವಲ ಅಲಂಕಾರಕ್ಕಾಗಿ ಅದರ ಬಳಕೆಯಾಗುವುದೂ ಉಂಟು.  

ಅಮೇರಿಕ ಸಂಯುಕ್ತ ಸಂಸ್ಥಾನ:  ಅಮೆರಿಕ ಸಂಯುಕ್ತ ಸಂಸ್ಥಾನದ ಅಧಿಕೃತ ಧ್ವಜ 1776 ರ ಜನವರಿ 1 ರಂದು ಬಳಕೆಯಲ್ಲಿ ಬಂತು.  ಅದನ್ನು ಬೋಸ್ಟನ್ನಿಗೆ ಮುತ್ತಿಗೆ ಹಾಕಿದ ಅಮೆರಿಕದ ಯೋಧಪಂಕ್ತಿಗಳು ಪ್ರಾಸ್ಪೆಕ್ಟ್ ಬೆಟ್ಟದ ಮೇಲೆ ಹಾರಿಸಿದುವು.  ಅದರಲ್ಲಿ 13 ಕೆಂಪು ಮತ್ತು ಬಿಳಿಯ ಪಟ್ಟೆಗಳಿದ್ದು ಮೇಲಿನ ಎಡಗಡೆಯ ಮೂಲೆಯಲ್ಲಿ ಸೇಂಟ್ ಜಾರ್ಜ್ ಮತ್ತು ಸೇಂಟ್ ಆಂಡ್ರೂ ಶಿಲುಬೆಗಳಿದ್ದ ಯೂನಿಯನ್ ಜ್ಯಾಕ್‍ನ ಚಿಹ್ನೆ ಇತ್ತು.  ಇದು ರಾಜನಿಷ್ಠೆಯ ಗುರುತಾಗಿತ್ತು.  ಈ ಧ್ವಜ ರಚನೆಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಧ್ವಜವನ್ನು ಹೋಲುತ್ತಿತ್ತು.  ಇದನ್ನು ಮೊದಲಿಗೆ ಕಾಂಟಿನೆಂಟಲ್ ಫ್ಲ್ಯಾಗ್, ಕಾಂಗ್ರೆಸ್ ಕಲರ್ಸ್ ಎಂತಲೂ ಅನಂತರ ಗ್ರ್ಯಾಂಡ್, ಗ್ರೇಟ್ ಯೂನಿಯನ್, ಕೇಂಬ್ರಿಜ್ ಫ್ಲ್ಯಾಗ್ ಎಂದೂ ಕರೆಯುತ್ತಿದ್ದರು.  ಇದೇ ಧ್ವಜವನ್ನು ಮುಂದೆ ಮೂರು ದಿನಗಳ ಅನಂತರ ಫಿಲಡೆಲ್ಫಿಯದಿಂದ ಹೊರಟ ಹಡಗುಪಡೆಯ ನೌಕೆಗಳ ಮೇಲೆ ಹಾರಿಸಲಾಯಿತು.  ಆದರೆ ಅಮೆರಿಕ ಸ್ವಾಂತಂತ್ರ್ಯ ಘೋಷಣೆಯ ಅನಂತರ ಈ ಧ್ವಜವನ್ನು ಬಳಸುವುದು ಸೂಕ್ತವಾಗಿ ತೋರಲಿಲ್ಲ.  ಆದ್ದರಿಂದ 1776  ಜೂನ್ 14  ರಂದು ಕಾಂಗ್ರೆಸ್ಸು ರಾಷ್ಟ್ರಧ್ವಜಕ್ಕೆ ಹೊಸ ನಕ್ಷೆಯನ್ನು ಆರಿಸಿತು.  ಹೊಸ ಧ್ವಜದಲ್ಲಿ ಇಂಗ್ಲೆಂಡಿನ ಮತ್ತು ಸ್ಕಾಟ್‍ಲೆಂಡಿನ ಕತ್ತರಿ ಪಟ್ಟೆಗಳ ಬದಲು 13 ತಾರೆಗಳಿದ್ದವು.  ವೆರ್ಮಾಂಟ್ ಮತ್ತು ಕೆಂಟಕಿ ರಾಜ್ಯಗಳು ಸಂಯುಕ್ತ ಸಂಸ್ಥಾನದಲ್ಲಿ ಸೇರಿದ ನಂತರ 1795 ರ ಮೇ 1 ರಂದು ಇನ್ನೊಂದು ಹೊಸ ಧ್ವಜ ಬಳಕೆಯಲ್ಲಿ ಬಂತು.  ಇದರಲ್ಲಿ 15 ಪಟ್ಟೆಗಳು 15 ನಕ್ಷತ್ರಗಳು ಇದ್ದವು.  ಇದು 1818 ರ ವರೆಗೆ ಅಂದರೆ ಇಪ್ಪತ್ತು ರಾಜ್ಯಗಳು ಒಕ್ಕೂಟದಲ್ಲಿ ಸೇರುವವರೆಗೂ ಬಳಕೆಯಲ್ಲಿತ್ತು.  ಆ ವರ್ಷದ ಏಪ್ರಿಲ್ 4 ರಂದು ಧ್ವಜದಲ್ಲಿ 13 ಕೆಂಪು ಮತ್ತು ಬಿಳಿಯ ಪಟ್ಟೆಗಳು ಇರಬೇಕೆಂದೂ ಒಕ್ಕೂಟದಲ್ಲಿ ಪ್ರತಿ ಸಲ ಒಂದೊಂದು ಹೊಸ ರಾಜ್ಯ ಸೇರಿದಾಗಲೂ ಧ್ವಜದಲ್ಲಿ ಒಂದೊಂದು ಹೊಸ ನಕ್ಷತ್ರವನ್ನು ಸೇರಿಸಬೇಕೆಂದು ಕಾಂಗ್ರೆಸ್ಸು ನಿರ್ಣಯಿಸಿತು.  

ಈಗ ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಧ್ವಜದಲ್ಲಿ 7 ಕೆಂಪು 6 ಬಿಳಿಯ ಹೀಗೆ ಒಟ್ಟೂ 13 ಅಡ್ಡಪಟ್ಟಿಗಳಿವೆ.  ಮೇಲಿನ ಮತ್ತು ಕೆಳಗಿನ ಪಟ್ಟೆಗಳು ಕೆಂಪು.  ಎಡಗಡೆಯ ಮೇಲಿನ ಮೂಲೆಯಲ್ಲಿ ಸ್ತಂಭಕ್ಕೆ ಹತ್ತಿರವಾಗಿ ಒಂದು ನೀಲಿ ಆಯತ ನಾಲ್ಕನೆಯ ಕೆಂಪು ಪಟ್ಟೆಯ ಬುಡದ ವರೆಗೂ ಹಬ್ಬಿದೆ.  1960 ರ ಜುಲೈ 4 ರಂದು ಆಯತದಲ್ಲಿ ಅನುಕ್ರಮವಾಗಿ 6 ಮತ್ತು 5 ರ ಒಟ್ಟೂ 9 ಲಂಬರೇಖೆಗಳಲ್ಲಿ ಜೋಡಿಸಲಾಗಿದ್ದ 5 ಮೊನೆಗಳುಳ್ಳ 50 ನಕ್ಷತ್ರಗಳಿದ್ದವು.  

ಯೂರೋಪ್:  ಯೂರೋಪಿನಲ್ಲಿ ಇನ್ನೂ ಬಳಕೆಯಲ್ಲಿರುವ ಅತ್ಯಂತ ಹಳೆಯ ಧ್ವಜಗಳೆಂದರೆ ಧರ್ಮಯುದ್ಧಗಳ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಕ್ರೈಸ್ತ ಶಿಲುಬೆಯ್ನೊಳಗೊಂಡ ಧ್ವಜಗಳು. ಬ್ರಿಟನ್, ಸ್ಕಾಂಡಿನೇವಿಯನ್ ದೇಶಗಳು (ಡೆನ್ಮಾರ್ಕ್, ಸ್ವೀಡನ್, ನಾರ್ವೆ ಮತ್ತು ಐರ್ಲೆಂಡ್), ಗ್ರೀಸ್ ಮತ್ತು ಸ್ವಿಟ್‍ಜರ್ಲೆಂಡುಗಳು ಶಿಲುಬೆಯ ಚಿಹ್ನೆಯಿರುವ ಧ್ವಜಗಳನ್ನು ಬಳಸುತ್ತವೆ.  ಇವುಗಳಲ್ಲಿ 1219 ರಿಂದ ಬಳಕೆಯಲ್ಲಿರುವ ಡೆನ್ಮಾರ್ಕಿನ ಧ್ವಜ ತೀರ ಹಳೆಯದು.  ಪ್ರಪಂಚದ ಹೆಚ್ಚು ದೇಶಗಳು ಎರಡು ಎಲ್ಲವೇ ಮೂರು ಬಣ್ಣಗಳಿರುವ ಧ್ವಜಗಳನ್ನು ಬಳಸುತ್ತವೆ.  

ಮುಸ್ಲಿಮ್ ರಾಜ್ಯಗಳು :  ಪಶ್ಚಿಮ ಏಷ್ಯದ ದೇಶಗಳು ಹೆಚ್ಚಾಗಿ ಇಸ್ಲಾಮ್ ಧರ್ಮ ಪ್ರಬಲವಾಗಿರುವ ದೇಶಗಳು.  ಈ ವಲಯದಲ್ಲಿ ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲ ಇಸ್ಲಾಮಿನ ಪ್ರಾಬಲ್ಯವಿದೆ.  ಕೆಂಪು ಧಾರ್ಮಿಕ ಹೋರಾಟಗಾರರ ಬಣ್ಣ, ಮಹಮ್ಮದ್ ಪೈಗಂಬರರು ಹಸಿರು ಪರದೆಯನ್ನು ಧ್ವಜವನ್ನಾಗಿ ಬಳಸಿಕೊಂಡಿದ್ದರೆಂದು ಪ್ರತೀತಿಯಿರುವುದರಿಂದ ಹಸಿರು ಮಹಮ್ಮದೀಯರಿಗೆ ಪವಿತ್ರ ಬಣ್ಣ.  ಬಿಳುಪು ಮತ್ತು ಕಪ್ಪೂ ಇಸ್ಲಾಮಿನ ಸಾಂಪ್ರದಾಯಿಕ ಬಣ್ಣಗಳು.  ಆದ್ದರಿಂದ ಈ ಪ್ರದೇಶದ ಧ್ವಜಗಳಲ್ಲಿ ಈ ನಾಲ್ಕು ಬಣ್ಣಗಳನ್ನೇ ಬಳಸಿರುವುದನ್ನು ಕಾಣಬಹುದು.  ಈ ವಲಯದ ಧ್ವಜಗಳಲ್ಲಿ ಒಂದಾದರೂ ಧಾರ್ಮಿಕ ಬಣ್ಣವನ್ನು, ಹೆಚ್ಚಾಗಿ ಹಸಿರನ್ನು ಧ್ವಜಗಳಲ್ಲಿ ಸೇರಿಸಲಾಗಿದೆ.   ವೃದ್ಧಿಚಂದ್ರ ಮತ್ತು ನಕ್ಷತ್ರ ಚಿಹ್ನೆಗಳಿಗೂ ಇಸ್ಲಾಮಿನೊಡನೆ ಸಂಬಂಧವನ್ನು ಕಲ್ಪಿಸಲಾಗಿದೆ.  ಈ ಚಿಹ್ನೆಯನ್ನು ಮೊದಲು ಆಟೋಮನ್ ತುರ್ಕರ ಅಧೀನದಲ್ಲಿದ್ದ ದೇಶಗಳು ಬಳಸುತ್ತಿದ್ದುವು.  ಇದರಿಂದಾಗಿ ತುರ್ಕಿ, ಲಿಬಿಯ, ಟ್ಯುನಿಷಿಯ ಮತ್ತು ಆಲ್ಜೀರಿಯ ದೇಶಗಳ ಧ್ವಜಗಳಲ್ಲಿ ಈ ಚಿಹ್ನೆಗಳನ್ನು ಕಾಣಬಹುದು.  ಮಾರಿಟಾನಿಯ, ಪಾಕಿಸ್ತಾನ, ಮಲೇಷಿಯ, ಸಿಂಗಪುರಗಳ ಧ್ವಜಗಳಲ್ಲಿ ಇವನ್ನು ಬಳಸಲಾಗುತ್ತಿದೆ.  ಬಾಂಗ್ಲಾದೇಶದ ಧ್ವಜದ ಬಣ್ಣ ಹಸಿರು.  ಇದರ ನುಡುವೆ ಕೆಂಪು ಗೋಲವಿದೆ.  

ಆಫ್ರಿಕ:  ಆಫ್ರಿಕ ಖಂಡದ ಹೆಚ್ಚು ದೇಶಗಳು 1915 ರಿಂದ ಈಚೆಗೆ ಸ್ವಂತಂತ್ರವಾದಂಥವು.  ಅವುಗಳ ಧ್ವಜಗಳೂ ಆನಂತರವೇ ರೂಪಿತವಾಗಿ ಬಳಕೆಗೆ ಬಂದುವು.  ಈ ವಲಯದ ಹೆಚ್ಚು ದೇಶಗಳು ಫ್ರೆಂಚರ ಇಲ್ಲವೇ ಇಂಗ್ಲಿಷರ ವಸಾಹತುಗಳಾಗಿದ್ದವು.  ಫ್ರೆಂಚ್ ಭಾಷೆ ಆಡುವ ದೇಶಗಳು ಹೆಚ್ಚಾಗಿ ತ್ರಿವರ್ಣಗಳನ್ನು ಲಂಬ ಪಟ್ಟೆಗಳಲ್ಲಿ ಬಳಸುತ್ತಿವೆ.  ಸಾಮಾನ್ಯವಾಗಿ ಹಸಿರು, ಹಳದಿ, ಕೆಂಪು ಬಣ್ಣಗಳೇ ಹೆಚ್ಚು.  ಮೇಲಣ ವೋಲ್ಟ್, ನೈಜರ್, ಐವರಿ ಕೋಸ್ಟ್ ಮತ್ತು ಮಲಗಾಸಿ ದೇಶಗಳ ಧ್ವಜಗಳಲ್ಲಿ ಈ ಬಣ್ಣಗಳ ಸಂಯೋಜನೆಯ ಬಳಕೆಯಾಗುತ್ತಿಲ್ಲ.  ಇಂಗ್ಲಿಷನ್ನು ಆಡುವ ದೇಶಗಳ ಧ್ವಜಗಳಲ್ಲಿ ತ್ರಿವರ್ಣಗಳ ಅಡ್ಡಪಟ್ಟೆಗಳಿರುತ್ತವೆ.  ಈ ಧ್ವಜಗಳಲ್ಲಿ ಹಸಿರು, ಹಳದಿ, ಕೆಂಪು ಬಣ್ಣಗಳನ್ನಲ್ಲದೆ, ನೀಲಿ ಮತ್ತು ಬಿಳಿಯ ಬಣ್ಣಗಳನ್ನೂ ಕಾಣಬಹುದು. ಕಾಮನ್‍ವೆಲ್ತ್ ದೇಶಗಳ ಧ್ವಜಗಳಲ್ಲಿ ಸಾಮಾನ್ಯವಾಗಿ ಹಸಿರು ಇದ್ದೇ ಇರುತ್ತದೆ.  ನೀಲಿಯೂ ಬಳಕೆಯಲ್ಲಿದೆ.  ಇವೆರಡು ಬಣ್ಣಗಳು ವ್ಯವಸಾಯ ಹಾಗೂ ಸಮುದ್ರದ ಸಂಕೇತಗಳು.  ಬಂಗಾರದ ಬಣ್ಣ, ಕಪ್ಪು ಮತ್ತು ಕೆಂಪು ಬಳಕೆಯಲ್ಲಿರುವಲ್ಲಿ ಅವು ನೈಸಗಿಕ ಸಂಪತ್ತು, ಆಫ್ರಿಕನ್ ಜನತೆ ಮತ್ತು ಸ್ವಾತಂತ್ರ್ಯ ಹೋರಾಟಗಳ ಸೂಚಕ.  ಈ ಕೂಟದ ಉಳಿದ ದೇಶಗಳ ಧ್ವಜಗಳ ಬಣ್ಣಗಳ ಆಯ್ಕೆಗೆ ಸ್ಥಳೀಯ ಇತಿಹಾಸ ಸ್ಫೂರ್ತಿ ನೀಡಿದೆ.  

ಇತರ ದೇಶಗಳು :  ವಸಾಹತು ಕಾಲಕ್ಕೆ ಮುಂಚೆ ಏಷ್ಯದ ದೇಶಗಳಲ್ಲಿ ಬೇರೆ ಬೇರೆ ವಿಶಿಷ್ಟ ರಾಷ್ಟ್ರೀಯ ಚಿಹ್ನೆಗಳು ರೂಪುಗೊಂಡಿದ್ದವು.  ಅದರಿಂದಾಗಿ ಈ ವಲಯದ ಧ್ವಜಗಳಲ್ಲಿ ಹೆಚ್ಚು ವೈವಿಧ್ಯವಿದೆ.  ವೃದ್ಧಿಚಂದ್ರ ಮತ್ತು ನಕ್ಷತ್ರ, ಚಂದ್ರ, ಸೂರ್ಯ, ಹಸಿರು, ಕೇಸರಿ - ಹೀಗೆ ಒಂದಿಲ್ಲೊಂದು ಧಾರ್ಮಿಕ ಚಿಹ್ನೆ ಇಲ್ಲವೇ ಬಣ್ಣದ ಬಳಕೆ ಈ ಪ್ರದೇಶದ ಧ್ವಜಗಳ ಒಂದು ವೈಶಿಷ್ಟ್ಯ. ಜಪಾನಿನ ಧ್ವಜದ್ದು ಬಿಳಿಯ ಬಣ್ಣ. ನಡುವೆ ಕೆಂಪುಗೋಲ ಇದೆ.  

ದಕ್ಷಿಣ ಅಮೆರಿಕ ಖಂಡದ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ಸೂಚಕವೆಂದು ಸೂರ್ಯನ ಚಿಹ್ನೆ ಹೆಚ್ಚು ಪ್ರಿಯವಾಗಿದೆ.  ಅರ್ಜೆಂಟೀನ, ಉರುಗ್ವೇಗಳ ಧ್ವಜಗಳಲ್ಲೂ ಫಿಲಿಫೀನ್ಸ್ ಧ್ವಜದಲ್ಲೂ ಈ ಚಿಹ್ನೆ ಇದೆ.  

ಅಂತರಷ್ಟ್ರೀಯ ಹಾಗೂ ಅಧಿರಾಷ್ಟ್ರೀಯ ಧ್ವಜಗಳು : ರಾಷ್ಟ್ರಧ್ವಜಗಳೇ ಅಲ್ಲದೆ ಅನೇಕ ಅಂತರರಷ್ಟ್ರೀಯ ಧ್ವಜಗಳೂ ಬಳಕೆಯಲ್ಲಿವೆ.  ಸ್ವಿಟ್‍ಜûರ್ಲೆಂಡಿನಲ್ಲಿ ಸ್ಥಾಪಿತವಾದ ರೆಡ್ ಕ್ರಾಸ್ ಸಂಸ್ಥೆಯ ಧ್ವಜ ಬಿಳಿಯದು; ಅದರ ಮೇಲೆ ಕೆಂಪು ಕತ್ತರಿ ಗುರುತು.  ಈ ಬಣ್ಣಗಳು ಸ್ವಿಟ್ಜ್‍ರ್ಲೆಂಡಿನ ಧ್ವಜದ ಬಣ್ಣಗಳಿಂದ ಭಿನ್ನವಾದ್ದು.  ತುರ್ಕಿ ಮೊದಲಾದ ಇಸ್ಲಾಮೀ ರಾಷ್ಟ್ರಗಳು ಕತ್ತರಿ ಗುರುತಿನ ಬದಲಾಗಿ ವೃದ್ಧಿಚಂದ್ರನನ್ನು ಬಳಸುತ್ತಿವೆ.  ಇರಾನ್ ಮೊದಲಾದ ರಾಷ್ಟ್ರಗಳು ಕೆಂಪು ಸಿಂಗನನ್ನು ಸೇರಿಸಿವೆ.  ಹಡಗಿನ ಮೇಲೆ ಆರೋಗ್ಯದ ಸ್ಥಿತಿಯನ್ನು ಸೂಚಿಸುವ ಹಳದಿ ಧ್ವಜವೂ ಚಾಲಕನ ಹಳದಿ ನೀಲಿ ಲಂಬ ಪಟ್ಟೆಗಳಿರುವ ಧ್ವಜವೂ ಅಂತರರಾಷ್ಟ್ರೀಯ ಧ್ವಜಗಳು.

ವಿಶ್ವಸಂಸ್ಥೆಯ ಧ್ವಜದಲ್ಲಿ ನೀಲಿ ಕ್ಷೇತ್ರದ ಮೇಲೆ ಮಧ್ಯದಲ್ಲಿ ಬಿಳಿಯ ಲಾಂಛನವಿದೆ.  ಅದರಲ್ಲಿ ಎರಡು ಆಲಿವ್ ಟೊಂಗೆಗಳ ನಡುವೆ ಪ್ರಪಂಚದ ಭೂಪಟವಿದೆ.  
ಐರೋಪ್ಯ ಒಕ್ಕೂಟದ ಧ್ವಜದ ಬಣ್ಣಗಳು ಹಸಿರು ಮತ್ತು ಬಿಳುಪು, ಒಲಂಪಿಕ್ ಪಂದ್ಯದ ಧ್ವಜ ಬಿಳಿಯದು.  ಅದರ ಮೇಲೆ ನೀಲಿ, ಹಳದಿ, ಕಪ್ಪು ಮತ್ತು ಕೆಂಪು ಉಂಗುರಗಳು ಒಂದರೊಳಗೊಂದು ಸಿಲುಕಿದಂತಿವೆ.  

ನೌಕಾಧ್ವಜಗಳು : ನೌಕಾದಳದ ನೌಕೆಗಳ ರಾಷ್ಟ್ರೀಯತೆಯನ್ನು ಸೂಚಿಸುವುದಕ್ಕೂ ಸರಕು ಸಾಗಿಸುವ ನೌಕೆಗಳು ಯಾವ ರಾಷ್ಟ್ರದಲ್ಲಿ ನೋಂದಣಿಯಾಗಿವೆ ಎಂಬುದನ್ನು ಸೂಚಿಸುವುದಕ್ಕೂ ಅವಕ್ಕೆ ಧ್ವಜಗಳನ್ನು ಬಳಸಲಾಗುತ್ತದೆ.  ಬಹುತೇಕ ರಾಷ್ಟ್ರಗಳ, ನೌಕಾದಳದ ನೌಕೆಗಳ ಧ್ವಜಗಳು ವ್ಯಾಪಾರಿ ನೌಕೆಗಳ ಧ್ವಜದಿಂದ ಭಿನ್ನವಾಗಿರುತ್ತವೆ.  ಗ್ರೇಟ್ ಬ್ರಿಟನ್ನಿನಲ್ಲಿ ಮೂರು ಬಗೆಯ ನೌಕಾ ಧ್ವಜಗಳನ್ನು ಬಳಸಲಾಗುತ್ತಿದೆ.  ಸೇಂಟ್ ಜಾರ್ಜನ ಶಿಲುಬೆ, ಸ್ತಂಭಕ್ಕೆ ಹತ್ತಿರವಾಗಿ ಮೇಲ್ಗಡೆ ಮೂಲೆಯಲ್ಲಿ ರಾಷ್ಟ್ರಧ್ವಜದ (ಯೂನಿಯನ್ ಜ್ಯಾಕ್) ಚಿಹ್ನೆ - ಇವು ಇರುವ ಬಿಳಿಯ ನೌಕಾ ಧ್ವಜವನ್ನು ರಾಯಲ್ ನೌಕಾದಳದ ನೌಕೆಗಳ ಮೇಲೆ ಹಾರಿಸುತ್ತಾರೆ.  ಸ್ಥಂಭಕ್ಕೆ ಹತ್ತಿರವಾಗಿ ಮೇಲ್ಗಡೆ ಮೂಲೆಯಲ್ಲಿ ರಾಷ್ಟ್ರಧ್ವಜದ ಚಿಹ್ನೆಯಿರುವ ನೀಲಿಧ್ವಜವನ್ನು ಮೀಸಲು ದಳದ ನೌಕೆಗಳು ಮತ್ತು ಕೆಲವು ಕ್ರೀಡಾವಿಹಾರ ಸಂಘಗಳ (ಕ್ಲಬ್ಬುಗಳ) ನೌಕೆಗಳು ಹಾರಿಸುತ್ತವೆ.  ವ್ಯಾಪಾರೀ ನೌಕೆಯೊಂದು ಈ ಧ್ವಜವನ್ನು ಬಳಸಬೇಕಾದರೆ ಅದರ ಕಪ್ತಾನ ಮತ್ತು ಅದರ ಆಧಿಕಾರಿಗಳು ಮತ್ತು ತಪಾಸಿಗಳಲ್ಲಿ ರಾಯಲ್ ನೌಕಾದಳಕ್ಕೆ ಇಲ್ಲವೇ ಕಾದಿಟ್ಟ ದಳಕ್ಕೆ ಸೇರಿದವರು ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಕೆಲವು ಸರ್ಕಾರಿ ಇಲಾಖೆಗಳ ನೌಕೆಗಳೂ ಆಯಾ ಇಲಾಖೆಗಳ ಲಾಂಛನಗಳನ್ನು ಒಳಗೊಂಡಂತೆ ಈ ಧ್ವಜವನ್ನು ಹಾರಿಸುತ್ತವೆ.  ಇದೇ ನಮೂನೆಯ ಕೆಂಪು ಧ್ವಜವನ್ನು ವ್ಯಾಪಾರೀ ನೌಕೆಗಳ ಮೇಲೆ ಹಾರಿಸುತ್ತಾರೆ.  ತಮ್ಮ ಲಾಂಛನಗಳನ್ನು ಸೇರಿಸಿ ಕೆಲವು ಸರ್ಕಾರಿ ಇಲಾಖೆಗಳು ಮತ್ತು ಕ್ರೀಡಾವಿಹಾರ ಸಂಘಗಳೂ ಈ ಧ್ವಜವನ್ನು ತಮ್ಮ ನೌಕೆಗಳ ಮೇಲೆ ಹಾರಿಸುತ್ತವೆ.

ಭಾರತದ ಯುದ್ಧನೌಕೆಗಳು ಹಾರಿಸುವ ಧ್ವಜಗಳು ಬ್ರಿಟಿಷ್ ನೌಕಾದಳದ ನೌಕೆಗಳು ಬಳಸುವ ಧ್ವಜಗಳಂತೆಯೇ ಇರುತ್ತವೆ.  ಆದರೆ ಅವುಗಳ ಮೇಲೆ ಬ್ರಿಟನ್ನಿನ ರಾಷ್ಟ್ರಧ್ವಜದ ಚಿಹ್ನೆಯ ಬದಲು ಭಾರತ ರಾಷ್ಟ್ರಧ್ವಜದ ಚಿಹ್ನೆಯಿರುತ್ತದೆ.  ವ್ಯಾಪಾರಿ ನೌಕೆಗಳ ಧ್ವಜಗಳು ಕೆಂಪು ಬಣ್ಣದವು.  ಸ್ತಂಭಕ್ಕೆ ಹತ್ತಿರವಾಗಿ ಮೇಲಿನ ಮೂಲೆಯಲ್ಲಿ ರಾಷ್ಟ್ರಧ್ವಜ ಚಿಹ್ನೆಯಿರುತ್ತದೆ.  ಜಪಾನಿನ ನೌಕಾಧ್ವಜ ಬಿಳಿಯದು.  ಅದರ ಮೇಲೆ ಒಂದು ಕೆಂಪು ಗೋಲವಿದ್ದು ಅದರಿಂದ ಸೂರ್ಯನ ಕಿರಣಗಳೋಪಾದಿಯಲ್ಲಿ ಕೆಲವು ಕೆಂಪು ಪಟ್ಟೆಗಳು ಹೊರಟು ಅಂಚುಗಳನ್ನು ತಲುಪುತ್ತವೆ.  ಅಮೆರಿಕ ಸಂಯುಕ್ತ ಸಂಸ್ಥಾನದ ನೌಕೆಗಳು ರಾಷ್ಟ್ರಧ್ವಜವನ್ನು ಹಾರಿಸುತ್ತವೆ.  ರಷ್ಯದ ಯುದ್ಧ ನೌಕೆಗಳ ಧ್ವಜ ಬಿಳಿಯದು; ಕೆಳಗೆ ಕಿರಿಯಗಲದ ತಿಳಿನೀಲಿ ಅಂಚಿರುತ್ತದೆ.  ಮೇಲೆ ಕಟ್ಟುವೆಡೆಯಲ್ಲಿ ಒಂದು ಕೆಂಪು ತಾರೆ ಮತ್ತು ಹಾರುವೆಡೆಯಲ್ಲಿ ಕೆಂಪು ಸುತ್ತಿಗೆ ಮತ್ತು ಕುಡುಗೋಲು ಇರುತ್ತದೆ.  

ಹೆಚ್ಚು ಕಡಿಮೆ ಎಲ್ಲ ನೌಕಾದಳಗಳಿಗೂ ಜ್ಯಾಕ್ ಎಂಬ ವಿಶಿಷ್ಟ ಧ್ವಜವಿರುತ್ತದೆ.  ನೌಕೆ ಬಂದರಿನಲ್ಲಿ  ಲಂಗರು ಹಾಕಿನಿಂತಿರುವ ಮತ್ತು ಕೆಲವು ಉತ್ಸವದ ಪ್ರಸಂಗಗಳಲ್ಲಿ ಅದನ್ನು ಮೂಕಿ ಮರದಿಂದ ಹಾರಿಸುತ್ತಾರೆ.  ಬ್ರಿಟಿಷ್ ನೌಕೆಗಳು ರಾಷ್ಟ್ರಧ್ವಜವನ್ನು ಜ್ಯಾಕ್‍ನಂತೆ ಬಳಸುತ್ತವೆ.  ಅಮೆರಿಕದ ನೌಕಾದಳದ ಜ್ಯಾಕ್ ನೀಲಿ ಧ್ವಜ ; ಅದರ ಮೇಲೆ ಬಿಳಿಯ ತಾರೆಗಳಿವೆ.  ಬಿಳಿಯ 5 ಮೊನೆಗಳಿರುವ ಒಂದು ತಾರೆ ಅದರ ಮೇಲೆ ಒಂದು ಕೆಂಪು ತಾರೆ ಮತ್ತು ಮೇಲೆ ಸುತ್ತಿಗೆ ಕಡುಗೋಲು ಇರುವ ಕೆಂಪುಧ್ವಜ ಸೋವಿಯತ್ ನೌಕೆಗಳು ಬಳಸುವ ಜ್ಯಾಕ್. ಉಪಚಾರಕ್ಕಾಗಿ ಜಾಕ್ ನೌಕೆಗಳು ತಾವು ಪ್ರವೇಶಿಸುವ ಪರರಾಷ್ಟ್ರಗಳ ಧ್ವಜಗಳನ್ನು ತಮ್ಮ ಧ್ವಜಗಳೊಂದಿಗೆ ಹಾರಿಸುತ್ತವೆ. 

ನಿಸ್ತಂತು ಪ್ರಸಾರಣ ಮುಂದುವರೆದಿರುವ ಈ ಕಾಲದಲ್ಲೂ ಸಮೀಪದಲ್ಲಿ ಸಂಜ್ಞೆಗಳ ಮೂಲಕ ಸಂದೇಶಗಳನ್ನು ಕಳಿಸುವುದಕ್ಕೆ ಧ್ವಜಗಳ ಉಪಯೋಗವಾಗುತ್ತಿದೆ.  ಧ್ವಜಗಳ ಮೂಲಕ ಸಂದೇಶಗಳನ್ನು ಕಳಿಸುವಾಗ ನೌಕಾದಳಗಳು ಅಂತರಾಷ್ಟ್ರೀಯ ಸಂe್ಞÁಸಂಹಿತೆಯನ್ನು ಬಳಸುತ್ತವೆ.  

ಸೇನಾಧ್ವಜಗಳು :  ಪ್ರಾಚೀನ ಕಾಲದಲ್ಲಿ ಯುದ್ಧದಲ್ಲಿ ಧ್ವಜಗಳಿಗೆ ಬಹಳ ಮಹತ್ವವಿತ್ತು.  ಯೋಧರು ಧ್ವಜಗಳನ್ನು ಜೊತೆಯಲ್ಲಿ ಒಯ್ಯುತ್ತಿದ್ದರು.  ಇದರಿಂದ ನಾಯಕರಿಗೆ ತಮ್ಮ ಜನರು ಎಲ್ಲಿದ್ದಾರೆನ್ನುವುದು ತಿಳಿಯುತ್ತಿತ್ತು.  ಧ್ವಜಗಳ ಮೂಲಕ ಗಾಳಿ ಎತ್ತ ಕಡೆ ಬೀಸುತ್ತಿತ್ತೆಂಬುದು ತಿಳಿಯುತ್ತಿತ್ತು.  ಅದರಿಂದ ಭಲ್ಲೆಗಳನ್ನೂ ಬಾಣಗಳನ್ನೂ ಎಸೆಯುವುದಕ್ಕೆ ಸಹಾಯವಾಗುತ್ತಿತ್ತು.  ಧ್ವಜಗಳು ಯುದ್ಧಮಾಡುತ್ತಿದ್ದ ಪಕ್ಷಗಳ ಪ್ರತೀಕಗಳಾಗಿದ್ದುದರಿಂದ ಕದನ ಅವುಗಳ ಸುತ್ತ ನಡೆಯುತ್ತಿತ್ತು.  ಧ್ವಜವನ್ನು ಹಿಡಿದ ಯೋಧ ಸತ್ತರೆ ಇಲ್ಲವೇ ಗಾಯಗೊಂಡರೆ ಉಳಿದವರು ಧಾವಿಸಿ  ಅದನ್ನೆತ್ತಿಕೊಂಡು ಹಾರಿಸುತ್ತಿದ್ದರು.  ಅದು ವೈರಿಗಳಕೈಗೆ ಸಿಗದಂತೆ ನೋಡಿಕೊಳ್ಳುತ್ತಿದ್ದರು.  ಧ್ವಜ ವೈರಿಗಳ ಕೈಗೆ ಬಿದ್ದಾಗ ಹಲವು ಸೈನಿಕರು ಯುದ್ಧವನ್ನು ನಿಲ್ಲಿಸುತ್ತಿದ್ದರು.  ಬ್ರಿಟಿಷರು 1881 ರ ಜನವರಿ 28 ರಂದು ದಕ್ಷಿಣ ಆಫ್ರಿಕದ ಲಾಂಗ್‍ನೆಕ್‍ನಲ್ಲಿ ಕೊನೆಯ ಸಲ ಸೇನಾಧ್ವಜವನ್ನು ಯುದ್ಧದಲ್ಲಿ ಬಳಸಿದರು.  ಈಗ ಸೈನಿಕರು ಧ್ವಜವನ್ನು ಕವಾಯಿತು ಉತ್ಸವಗಳಲ್ಲಿ ಬಳಸುತ್ತಾರೆ.  ರೆಜಿಮೆಂಟ್ ಮುಂತಾದ ದೊಡ್ಡ ತಂಡಗಳಿಗೆ ವಿಶಿಷ್ಟ ಧ್ವಜಗಳಿರುತ್ತವೆ.  ಇವಕ್ಕೆ ಕಲರ್ಸ್ ಎಂದು ಹೆಸರು.  ಈ ಧ್ವಜಗಳ ಮೇಲೆ ಆ ತಂಡಗಳು ಹೆಚ್ಚುಗಾರಿಕೆಯಿಂದ ಸೇವೆಸಲ್ಲಿಸಿದ ಯುದ್ಧಗಳ ಮತ್ತು ದಂಡಯಾತ್ರೆಗಳ ಹೆಸರುಗಳಿರುತ್ತವೆ.  ಚಿಕ್ಕ ತಂಡಗಳು ಕವಾಯತುಗಳಲ್ಲಿ ಶಿಸ್ತಿನಿಂದ ನಡೆಯುವ ಕಾಲಕ್ಕೆ ಸೈನಿಕರಿಗೆ ಮಾರ್ಗದರ್ಶನಗಳಂತೆ ಗೈಡನ್‍ಗಳನ್ನು ಬಳಸುತ್ತವೆ.  ಬ್ರಿಟನ್ನಿನಲ್ಲಿ ಸೇನಧ್ವಜ ಕೆಂಪು.  ಮೇಲೆ ಎರಡು ಖಡ್ಗಗಳು ಕತ್ತರಿಯ ಆಕೃತಿಯಲ್ಲಿ ಇರುತ್ತವೆ.  ಅಮೆರಿಕದ ಸೇನಾ ತಂಡಗಳು ಧ್ವಜಗಳಿಗೆ ತಾವು ಭಾಗವಹಿಸಿದ ಯುದ್ಧಗಳನ್ನು ಸೂಚಿಸುವ ಪಟ್ಟೆಗಳನ್ನು ಜೋಡಿಸುತ್ತವೆ.  ಭಾರತದ ಸೇನಾಧ್ವಜ ವ್ಯಾಪಾರೀ ನೌಕೆಗಳ ಧ್ವಜಗಳಂತೆಯೇ ಇದ್ದು ಹಾರುವಲ್ಲಿ ಸೈನ್ಯದ ಲಾಂಛನ ಇರುತ್ತವೆ.  

ಇತರ ಧ್ವಜಗಳು :  ಹಲವು ವೈಯಕ್ತಿಕ ಧ್ವಜಗಳು ರಾಷ್ಟ್ರಧ್ವಜಗಳಿಗಿಂತ ಹಳೆಯವು.  ಯುದ್ಧದಲ್ಲಿ ಅವಕ್ಕೆ ವಿಶೇಷ ಮಹತ್ವವಿತ್ತು.  ಯೂರೋಪಿನಲ್ಲಿ ಕುಲೀನರಿಗೆ ಅವರವರ ದರ್ಜೆಗಳಿಗನುಗುಣವಾಗಿ ವಿವಿಧ ಆಕಾರಗಳ ಧ್ವಜಗಳಿರುತ್ತಿದ್ದವು.  ಇಂಗ್ಲೆಂಡಿನ ಅರಸರಿಗೆ 8 ಗಜಗಳ ವರೆಗೆ ಉದ್ದವಾಗಿದ್ದ ಧ್ವಜಗಳಿದ್ದುವು.  ಸರದಾರರು ತಮ್ಮ ಭಲ್ಲೆಗಳ ತುದಿಯಲ್ಲಿ ಪೆನ್ನನ್ ಎಂಬ ಚಿಕ್ಕ ತ್ರಿಕೋಣಾಕೃತಿಯ ಧ್ವಜಗಳನ್ನು ಒಯ್ಯುತ್ತಿದ್ದರು.  ಈಗಲೂ ಇಂಗ್ಲೆಂಡ್ ಇರಾನ್ ಮೊದಲಾದ ದೇಶಗಳ ಆಳರಸರಿಗೆ ವೈಯಕ್ತಿಕ ಧ್ವಜಗಳಿವೆ.  ಇಂಗ್ಲೆಂಡಿನ ರಾಜಕುಟುಂಬದ ಸದಸ್ಯರಿಗೂ ವಿಶಿಷ್ಟ ವೈಯಕ್ತಿಕ ಧ್ವಜಗಳುಂಟು.  ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಅವರವೇ ಆದ ಧ್ವಜಗಳಿವೆ.  ಅನೇಕ ದೇಶಗಳಲ್ಲಿ ಮಂತ್ರಿಮಂಡಲಗಳ ಸದಸ್ಯರಿಗೂ ಸೇನಾಧಿಪತಿ, ನೌಬಲಾಧಿಪತಿ ಮೊದಲಾದ ಹಿರಿಯ ಅಧಿಕಾರಿಗಳಿಗೂ ವೈಯಕ್ತಿಕ ಧ್ವಜಗಳಿವೆ.  ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲ ರಾಜ್ಯಗಳೂ ಕೆಲವು ಮುಖ್ಯ ನಗರಗಳೂ ತಮ್ಮವೇ ಆದ ಧ್ವಜಗಳನ್ನು ಹೊಂದಿವೆ. 

ವಿಮಾನಪಡೆಗಳೂ ಧ್ವಜಗಳನ್ನು ಬಳಸುತ್ತವೆ.  ಬ್ರಿಟನ್ನಿನ ರಾಯಲ್ ವಿಮಾನಪಡೆಯ ಧ್ವಜ ನೀಲಿ; ಇದು ನೌಕಾಧ್ವಜದಂತೆಯೇ ಇದೆ.  ಆದರೆ ಇದರ ಬಣ್ಣ ತಿಳಿನೀಲಿ; ಇದರ ಮೇಲೆ ಹಾರುವೆಡೆಯಲ್ಲಿ ದೊಡ್ಡದೊಂದು ನೀಲಿ, ಬಿಳಿದು ಮತ್ತು ಕೆಂಪು ಬಣ್ಣಗಳ (ಮಧ್ಯದಲ್ಲಿ ಕೆಂಪು) ಬಿಂಬವಿದೆ.  ಸಿವಿಲ್ ವಿಮಾನದ ಧ್ವಜ ತಿಳಿನೀಲಿ ಬಣ್ಣದ್ದು.  ಅದರ ಮೇಲೆ ಬಿಳಿಯ ಅಂಚಿರುವ ಕಪ್ಪು ನೀಲಿ ಶಿಲುಬೆಯಿದೆ.  ಕಟ್ಟುವೆಡೆ ಮೇಲಿನ ಮೂಲೆಯಲ್ಲಿ ರಾಷ್ಟ್ರಧ್ವಜದ ಚಿಹ್ನೆಯುಂಟು.  ಭಾರತದ ವೈಮಾನಿಕ ಪಡೆಯ ಧ್ವಜದ ಬಣ್ಣ ತಿಳಿನೀಲಿ. ಕಟ್ಟುವೆಡೆ ಮೇಲ್ಗಡೆಯಲ್ಲಿ ರಾಷ್ಟ್ರಧ್ವಜದ ಚಿಹ್ನೆ ಮತ್ತು ಹಾರುವೆಡೆಯಲ್ಲಿ ಕೇಸರಿ, ಬಿಳಿದು, ನೀಲಿ ಬಣ್ಣಗಳ ದೊಡ್ಡ ಬಿಂಬ ಇವೆ.  ಪಾಕಿಸ್ತಾನದ ವಿಮಾನ ಪಡೆಯ ಧ್ವಜದ ಬಣ್ಣ ತಿಳಿಹಸಿರು, ಮೇಲೆ ಕಟ್ಟುವೆಡೆಯಲ್ಲಿ ರಾಷ್ಟ್ರಧ್ವಜದ ಚಿಹ್ನೆ ಮತ್ತು ಹಾರುವೆಡೆಯಲ್ಲಿ ಹಸಿರು ಮತ್ತು ಬಿಳಿ ಬಣ್ಣಗಳ ಬಿಂಬವಿದೆ. 

ವಿಹಾರನೌಕೆಗಳೂ ಬೇರೆ ಬೇರೆ ಧ್ವಜಗಳನ್ನು ಹಾರಿಸುತ್ತವೆ.  ಬರ್ಗೀ ಎನ್ನುವ ತ್ರಿಕೋಣಾಕೃತಿಯ ಧ್ವಜ ವಿಹಾರ ನೌಕಾ ಸಂಘಗಳು ತಮ್ಮ ನೌಕೆಗಳ ಮೇಲೆ ಹಾರಿಸುವ ಧ್ವಜಗಳಲ್ಲೊಂದು.  ಈ ಧ್ವಜ ಇಂಗ್ಲೆಂಡಿಗಿಂತಲೂ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಹೆಚ್ಚು ಬಳಕೆಯಲ್ಲಿದೆ.  ವಿಹಾರನೌಕೆಗಳು ಪಂದ್ಯಗಳಲ್ಲಿ ಭಾಗವಹಿಸುವಾಗ ಅವುಗಳ ಗುರುತಿಗಾಗಿ ಬೇರೆ ಬೇರೆ ಧ್ವಜಗಳನ್ನು ಹಾರಿಸುತ್ತಾರೆ.  ಆ ನೌಕೆಗಳು ಬೇರೆ ಬೇರೆ ಆಕೃತಿಯವಿರುತ್ತವೆ.  ವ್ಯಾಪಾರಿ ಹಡಗು ಸಂಸ್ಥೆಗಳು ತಮ್ಮ ಹಡಗುಗಳ ಮೇಲೆ ತಮ್ಮದೇ ಆದ ಧ್ವಜಗಳನ್ನು ಹಾರಿಸುತ್ತವೆ.  ಬಾಲಚಮೂಗಳು ಒಂದೆರಡು ಕೈಧ್ವಜಗಳ ಮೂಲಕ ಸಂದೇಶ ಕಳಿಸುವುದನ್ನು ಕಲಿಯುತ್ತಾರೆ.  ರಾಜಕೀಯ ಪಕ್ಷಗಳು ತಮ್ಮದೇ ಆದ ಧ್ವಜಗಳನ್ನು ಬಳಸುವುದುಂಟು.  ಅಂತೆಯೇ ಕೆಲವು ಆದರ್ಶ ಉದ್ದೇಶಗಳನ್ನು ಕೂಟಗಳೂ ವಿಶಿಷ್ಟ ಧ್ವಜಗಳನ್ನು ಬಳಸುತ್ತವೆ.  ಅನೇಕ ಸಲ ಧಾರ್ಮಿಕ ಮಠಗಳೂ ಮಠಾಧೀಶರೂ ಪಂಥಗಳೂ ತಮ್ಮವೇ ಆದ ಧ್ವಜಗಳನ್ನು ಹೊಂದಿರುವುದುಂಟು.  ಇಂಥ ಧ್ವಜಗಳ ಮೇಲೆ ವಿಶಿಷ್ಟ ಲಾಂಛನಗಳಿರುತ್ತವೆ.  ರಸ್ತೆಗಳ ಟ್ರಕ್ಕು, ಲಾರಿಗಳ ಮೇಲೆ ಅಪಾಯಸೂಚಕವಾಗಿ ಕೆಂಪು ಧ್ವಜಗಳನ್ನು ಹಾರಿಸುವುದು ಸಾಮಾನ್ಯ.

ಭಾರತ ರಾಷ್ಟ್ರಧ್ವಜ:  ಭಾರತ ರಾಷ್ಟ್ರಧ್ವಜದಲ್ಲಿ (ಮೇಲಿನಿಂದ) ಕೇಸರಿ ಬಿಳುಪು ಮತ್ತು ಹಸಿರು - ಹೀಗೆ ಸಮ ಅಗಲದ ಮೂರು ವರ್ಣಗಳ ಅಡ್ಡಪಟ್ಟಿಗಳು ಇವೆ. ಬಿಳಿಯ ಪಟ್ಟಿಯ ಮೇಲೆ ಮಧ್ಯದಲ್ಲಿ 24 ಅರಗಳ ಚಕ್ರವಿದೆ.  ಭಾರತ ಸ್ವತಂತ್ರವಾದ ಬಳಿಕ ಇದು 1947 ರಲ್ಲಿ ಬಳಕೆಯಲ್ಲಿ ಬಂತು.  ಕೇಸರಿ, ಬಿಳುಪು ಮತ್ತು ಕಪ್ಪುಹಸಿರು ಬಣ್ಣಗಳು ಸಮಪ್ರಮಾಣದಲ್ಲಿ ಇರುತ್ತವೆ.  ಬಿಳಿಯ ಪಟ್ಟೆಯ ಮಧ್ಯಬಾಗದಲ್ಲಿ ಸಮುದ್ರ ನೀಲಿ ಬಣ್ಣದಲ್ಲಿ ಒಂದು ಚಕ್ರವಿರುತ್ತದೆ.  ಚಕ್ರದ ರಚನೆ ಸಾರನಾಥದ ಅಶೋಕಸ್ತಂಭದ ಸಿಂಹಶೀರ್ಷದ ಪೀಠದಲ್ಲಿ ಕಾಣುವ ಚಕ್ರದಂತಿದೆ.  ಧ್ವಜದ ಎತ್ತರ ಉದ್ದಗಳ ಪ್ರಮಾಣ 2:3 ಇರುತ್ತದೆ.  

ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಭಾರತಕ್ಕೆ ರಾಷ್ಟ್ರಧ್ವಜವೆಂಬುದೊಂದು ಇರಲಿಲ್ಲ.  ಬ್ರಿಟಿಷರ ಅಡಳಿತ ಪ್ರಾರಂಭವಾಗುವುದಕ್ಕಿಂತ ಮುಂಚೆ ವಿಸ್ತಾರ ಭಾರತದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರಾಜವಂಶಗಳ ರಾಜರು ಸ್ವತಂತ್ರವಾಗಿ ಆಳುತ್ತಿದ್ದರು.  ಅವರಿಗೆ ತಮ್ಮದೇ ಆದ ಧ್ವಜಗಳಿದ್ದುವು.  ಹೀಗಾಗಿ ರಾಷ್ಟ್ರಧ್ವಜವೊಂದು ಬಳಕೆಯಲ್ಲಿ ಬರುವುದು ಅಸಾಧ್ಯವಾದ ಮಾತಾಗಿತ್ತು.  ಭಾರತವನ್ನು ಆಳಿದ ಬ್ರಿಟಿಷರು ತಮ್ಮ ರಾಷ್ಟ್ರಧ್ವಜವಾದ ಯೂನಿಯನ್ ಜ್ಯಾಕನ್ನೇ ಭಾರತದ ಮೇಲೆ ಹೊರಿಸಿದ್ದರು.  

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ದೇಶಪ್ರೇಮಿಗಳು ಭಾರತೀಯರೆಲ್ಲರೂ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ಒಂದಾಗಬೇಕಾದರೆ ಅವರ ಗಮನ ಸೆಳೆಯುವುದಕ್ಕೆ, ಅವರು ಏಕೀಕೃತವಾದ ನಿಷ್ಠೆಯನ್ನು ಸಲ್ಲಿಸುವುದಕ್ಕೆ ರಾಷ್ಟ್ರಧ್ವಜವೊಂದರ ಆವಶ್ಯಕತೆಯನ್ನು ಮನಗಂಡರು.  ಫ್ರಾನ್ಸಿನಲ್ಲಿ ಆಶ್ರಯ ಹೊಂದಿದ್ದ ಮೆಡೇಮ್ ಕಾಮಾ ಮತ್ತು ಮಿತ್ರರು ಮೊತ್ತ ಮೊದಲಿಗೆ 1906 ರಲ್ಲಿ ಒಂದು ರಾಷ್ಟ್ರಧ್ವಜವನ್ನು ಕಲ್ಪಿಸಿದರು.  ಇದರಲ್ಲಿ ಮೇಲಿಂದ ಅನುಕ್ರಮವಾಗಿ ಕೇಸರಿ, ಬಿಳುಪು ಮತ್ತು ಹಸಿರು ಅಡ್ಡಪಟ್ಟೆಗಳಿದ್ದವು.  ಮೇಲಿನ ಪಟ್ಟೆಯಲ್ಲಿ 8 ತಾರೆಗಳಿದ್ದವು.  ಬಿಳಿಯ ಪಟ್ಟಿಯ ಮೇಲೆ ದೇವನಾಗರಿ ಲಿಪಿಯಲ್ಲಿ ವಂದೇ ಮಾತರಮ್ ಎಂಬ ಲಿಖಿತವಿತ್ತು.  ಕೆಳಗಿನ ಪಟ್ಟೆಯ ಮೇಲೆ ಸೂರ್ಯ ಮತ್ತು ಅರ್ಧಚಂದ್ರನ ಚಿಹ್ನೆಗಳಿದ್ದವು.  ಇದು ಭಾರತದಲ್ಲಿ ಪ್ರಚಾರದಲ್ಲಿ ಬರಲಿಲ್ಲ.  

ಮುಂದೆ ಆನಿಬೆಸೆಂಟರ ಸ್ವರಾಜ್ಯ ಚಳುವಳಿಯ ಕಾಲಕ್ಕೆ ಇನ್ನೊಂದು ಧ್ವಜವನ್ನು ರೂಪಿಸಲಾಯಿತು.  ಇದರಲ್ಲಿ 5 ಬಿಳುಪು ಮತ್ತು 4 ಕೆಂಪು ಪಟ್ಟೆಗಳು ಒಂದಾದಮೇಲೊಂದರಂತೆ ಇದ್ದು ಸ್ತಂಭಕ್ಕೆ ಹತ್ತಿರವಾಗಿ ಮೇಲ್ಗಡೆಯಲ್ಲಿ ಯೂನಿಯನ್ ಜ್ಯಾಕ್ ಇತ್ತು.  ಕೆಳಗೆ ಸಪ್ತರ್ಷಿಮಂಡಲವಿತ್ತು.  ಯೂನಿಯನ್ ಜ್ಯಾಕಿದ್ದುದರಿಂದ ಇದು ರಾಜನಿಷ್ಠೆಯ ಸೂಚಕವಾಗಿತ್ತು.  
ಪಂಜಾಬಿನ ಲಾಲಾ ಹಂಸರಾಜ್ ರೂಪಿಸಿದ ರಾಷ್ಟ್ರಧ್ವಜದಲ್ಲಿ ಚರಖದ ಚಿಹ್ನೆಯಿರಬೇಕೆಂಬ ಸೂಚನೆ ಗಾಂಧೀಜಿಯವರಿಗೆ ಒಪ್ಪಿಗೆಯಾಯಿತು.  ಇದಕ್ಕೆ ಅನುಗುಣವಾಗಿ ವಿ. ವೆಂಕಯ್ಯ ಎಂಬುವವರು ರಚಿಸಿದ ಧ್ವಜದಲ್ಲಿ ಬಿಳುಪು, ಹಸಿರು ಮತ್ತು ಕೆಂಪು ಅಡ್ಡಪಟ್ಟೆಗಳಿದ್ದುವು.  ಮೂರೂ ಪಟ್ಟೆಗಳನ್ನು ಮುಟ್ಟುವಂತೆ ಮಧ್ಯದಲ್ಲಿ ದೊಡ್ಡ ಚರಖವಿದ್ದಿತ್ತು.  ಬಿಳುಪು ಅಲ್ಪಸಂಖ್ಯಾತರ, ಹಸಿರು ಮಹಮ್ಮದೀಯರ, ಕೆಂಪು ಹಿಂದುಗಳ ಸಂಕೇತವೆಂದು ಹೇಳಲಾಗಿತ್ತು.  ಮುಂದೆ ತ್ರಿವರ್ಣಗಳ ಧಾರ್ಮಿಕ ಸಂಕೇತವನ್ನು ಅಲ್ಲಗಳೆದು ಅವು ಕೆಲವು ಗುಣಗಳ ಪ್ರತೀಕವೆಂದು ಹೇಳಲಾಯಿತು. 

1931 ರಲ್ಲಿ ಕಾಂಗ್ರೆಸ್ಸಿನಿಂದ ನೇಮಿತವಾದ ಸಮಿತಿಯೊಂದು ಸೂಚಿಸಿದ ಧ್ವಜ ಕೇಸರಿಬಣ್ಣದ ಆಯತವಾಗಿದ್ದು ಅದರ ಮೇಲೆ ಚಿಕ್ಕ ಚರಖವಿದ್ದಿತ್ತು.  ಇದು ಕಾಂಗ್ರೆಸ್ಸಿಗೆ ಒಪ್ಪಿಗೆಯಾಗಲಿಲ್ಲ.  ಅನಂತರ ಕಲ್ಪಿತವಾದ ಧ್ವಜಕ್ಕೆ ಕಾಂಗ್ರೆಸ್ಸಿನ ಸಮ್ಮತಿ ದೊರಕಿತು.  ಅದರಲ್ಲಿ ಕೇಸರಿ, ಬಿಳುಪು ಮತ್ತು ಹಸಿರು ಅಡ್ಡಪಟ್ಟಿಗಳಿದ್ದವು.  ಮಧ್ಯದ ಬಿಳಿಯ ಪಟ್ಟೆಯ ಮೇಲೆ ಚರಖವಿತ್ತು.  ಈ ಧ್ವಜವನ್ನು ನಾಡು ಒಪ್ಪಿಕೊಂಡಿತು.  ಅದರ ಕೆಳಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯಿತು.  ಧ್ವಜದಲ್ಲಿಯ ಕೇಸರಿ ವರ್ಣ ಧೈರ್ಯತ್ಯಾಗಗಳನ್ನೂ ಬಿಳುಪು ಸತ್ಯಶಾಂತಿಗಳನ್ನೂ ಹಸಿರು ಶ್ರದ್ಧಾಭಕ್ತಿಗಳನ್ನೂ ಸೂಚಿಸುತ್ತವೆಂದು ಅರ್ಥೈಸಲಾಯಿತು.  

ಆದರೆ ಈ ಧ್ವಜದಲ್ಲಿ ಕೂಡ ಒಂದೆರೆಡು ಕುಂದುಗಳಿದ್ದವು.  ಕೆಲವರು ಅದನ್ನು ಕಾಂಗ್ರೆಸ್ಸಿನ, ಎಂದರೆ ಒಂದು ರಾಜಕೀಯ ಪಕ್ಷದ ಧ್ವಜವಾಗಿ ಕಂಡರು. ಅದರ ಮೇಲಿದ್ದ ಚರಖದ ಕದಿರು ಒಂದು ಕಡೆಯಿಂದ ನೋಡುವವರಿಗೆ ಬಲಗೈ ಕಡೆಗೂ ಇನ್ನೊಂದು ಬದಿಯಿಂದ ನೋಡುವವರಿಗೆ ಎಡಗೈ ಕಡೆಗೂ ಇರುವಂತೆ ಕಾಣಿಸುತ್ತಿತ್ತು.  ಇದರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇನ್ನೊಂದು ಧ್ವಜದ ಆವಶ್ಯಕತೆ ಸ್ಪಷ್ಟವಾಯಿತು.  

ಇಂದಿನ ರಾಷ್ಟ್ರ ಧ್ವಜದಲ್ಲಿ ಕಾಂಗ್ರೆಸ್ ಧ್ವಜದ ಚರಖದ ಬದಲಾಗಿ ಸಾರನಾಥದ ಅಶೋಕಚಕ್ರವರ್ತಿ ನಿಲ್ಲಿಸಿದ್ದ ಸ್ತಂಭದ ಸಿಂಹಶೀರ್ಷದ ಶಿಲಾಪೀಠದಿಂದ ತೆಗೆದುಕೊಂಡ ಚಕ್ರವಿದೆ.
ಭಾರತದ ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣಗಳಿಗೆ ಮತ್ತು ಚಕ್ರಕ್ಕೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸುವುದು ಸಾಧ್ಯ.  ಕೇಸರಿ ನಿಸ್ವಾರ್ಥತೆಯ, ಸಂನ್ಯಾಸಿಗಳ, ತ್ಯಾಗಿಗಳ ಬಣ್ಣ. ಇದನ್ನು ಬೌದ್ಧಧರ್ಮದ ಬಣ್ಣವೆಂದೂ ಹೇಳಬಹುದು.  ಬಿಳುಪು ಸತ್ಯ, ಶಾಂತಿ, ನೈರ್ಮಲ್ಯ, ಹೊಂದಿಕೆ, ಪರಿಶುದ್ಧತೆಗಳ ದ್ಯೋತಕ. ಪಶ್ಚಿಮದ ಹಿರಾಲ್ಡ್ರಿ ಪದ್ಧತಿಗೆ ಅನುಸಾರವಾಗಿ ಕೇಸರಿ - ಹಸಿರುಗಳ ನಡುವೆ ಇದು ಇರುವುದು ಸಮರ್ಪಕ. ಇದು ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ ಬಣ್ಣವೆಂದೂ ಪರಿಗಣಿಸಲಾಗುತ್ತದೆ.  ಹಸಿರು ಸಸ್ಯಶಾಮಲೆ ಭೂಮಿಯ ಸಂಕೇತ. ಕೃಷಿ, ಕೈಗಾರಿಕೆಗಳ ಸಮೃದ್ಧಿಯ ಗುರುತು.  ಹಸಿರು ಮುಸ್ಲಿಮರ ಬಣ್ಣವೂ ಹೌದು.  ಚಕ್ರ ಮುನ್ನಡೆಯ ಸಂಕೇತ. ಪರಿಪೂರ್ಣತೆಯ ಗುರುತು.  ಸೂರ್ಯನನ್ನೂ ಗುರುತಿಸಬಲ್ಲುದು.  ಇದು ಬೌದ್ಧಧರ್ಮದ ಚಿಹ್ನೆ.  ಧರ್ಮ ಚಕ್ರದ ಚಿಹ್ನೆ. ಇದು ಮಹಾವಿಷ್ಣುವಿನ ಆಯುಧಗಳಲ್ಲೊಂದು.  ಇದು ಮೊದಲಿನ ಧ್ವಜದಲ್ಲಿನ ಚರಖದ ಪ್ರತೀಕವೂ ಹೌದು.  
ಸಾಮ್ರಾಟ ಅಶೋಕ ಆಳಿದ ಪ್ರದೇಶ ಬಹಳ ವಿಸ್ತಾರವಾಗಿತ್ತು.  ಭಾರತದ ಬಹುಭಾಗ ಅದರಲ್ಲಿ ಸೇರಿತ್ತು.  ಪ್ರಾಚೀನ ಭಾರತದಲ್ಲಿ ಆಳಿದ ಅರಸರಲ್ಲಿ ಅಶೋಕ ದೊಡ್ಡವನು.  ಅವನ ಆಳ್ವಿಕೆಯಲ್ಲಿ ದೇಶ ಸಮೃದ್ಧವೂ ವೈಭವ ಸಂಪನ್ನವೂ ಆಗಿತ್ತು.  ಅವನು ತೀರ್ಥಯಾತ್ರೆ ಹೊರಟಾಗ ಬುದ್ಧನ ಪ್ರಥಮ ಧರ್ಮಚಕ್ರ ಪ್ರವರ್ತನದ ಕ್ಷೇತ್ರವೆನಿಸಿದ ಸಾರನಾಥವನ್ನೂ ಸಂದರ್ಶಿಸಿ ಅಲ್ಲಿ ಸ್ಮಾರಕಸ್ತಂಭವನ್ನು ಕಟ್ಟಿಸಿದ.  ಆ ಸ್ತಂಭದ ಸಿಂಹಶೀರ್ಷದಲ್ಲಿರುವ ಚಕ್ರ  ರಾಷ್ಟ್ರಧ್ವಜದ ಚಕ್ರಕ್ಕೆ ಮಾದರಿಯಾಗಿರುವುದರಿಂದ ಈ ಚಕ್ರ ಸಮೃದ್ಧಿ, ಭವ್ಯತೆ, ಏಕಾಧಿಪತ್ಯ, ಧರ್ಮಗಳ ಪ್ರತೀಕವೆನ್ನಬಹುದು.  

ಇದು ಸಾಮ್ರಾಜ್ಯದ ಧ್ವಜವಲ್ಲ, ನಿರಂಕುಶ ಪ್ರಭುತ್ವದ ಧ್ವಜವಲ್ಲ. ಯಾರ ಮೇಲೆಯೂ ಅಧಿಕಾರ ನಡೆಸುವ ಧ್ವಜವಲ್ಲ. ಕೇವಲ ಭಾರತೀಯರಿಗಲ್ಲದೆ ಇದನ್ನು ನೋಡುವ ಎಲ್ಲ ಜನರಿಗೂ ಇದು ಸ್ವಾತಂತ್ರ್ಯದ ಸಂಕೇತ.  ಇದು ಎಲ್ಲೆಲ್ಲಿ ಹೋಗಬಹುದೋ ಅಲ್ಲೆಲ್ಲ - ಎಲ್ಲೆಲ್ಲಿ ಭಾರತೀಯರು ವಾಸವಾಗಿರುತ್ತಾರೋ ಅಥವಾ ಭಾರತದ ರಾಯಭಾರಿಗಳು, ಮಂತ್ರಿಗಳು ಇರುವರೋ ಅಲ್ಲಿಗೆ ಮಾತ್ರವಲ್ಲದೆ, ದೂರದ ಸಮುದ್ರಗಳಾಚೆ ಎಲ್ಲೆಲ್ಲಿ ಭಾರತದ ಹಡಗುಗಳು ಇದನ್ನೊಯ್ಯುವುವೋ ಅಲ್ಲೆಲ್ಲ - ಆ ಜನರಿಗೆ ಸ್ವಾತಂತ್ರ್ಯದ ಸಂದೇಶವನ್ನು, ಸಾಹಚರ್ಯದ ಸಂದೇಶವನ್ನು, ಪ್ರಪಂಚದ ಎಲ್ಲ ರಾಷ್ಟ್ರಗಳೊಂದಿಗೆ ಸ್ನೇಹವನ್ನು ಭಾರತ ಬಯಸುತ್ತಿದೆಯಲ್ಲದೆ ಸ್ವಾತಂತ್ರ್ಯವಿಲ್ಲದ ಜನರಿದ್ದರೆ ಅವರಿಗೆ ಸಹಾಯ ನೀಡಲು ಆಶಿಸುತ್ತದೆ ಎಂಬ ಸಂದೇಶವನ್ನು ಈ ಧ್ವಜ ಒಯ್ಯುತ್ತದೆ - ಎಂದು ಭಾರತದ ರಾಷ್ಟ್ರಧ್ವಜದ ವಿಚಾರವಾಗಿ ಪ್ರಥಮ ಪ್ರಧಾನಿ ನೆಹರೂ ಅವರು ತಮ್ಮ ವಿಶ್ವಾಸ ಆಶಯಗಳನ್ನು ವ್ಯಕ್ತಗೊಳಿಸಿದ್ದರು.
ರಾಷ್ಟ್ರಧ್ವಜದ ಪ್ರಾಮುಖ್ಯ :  ರಾಷ್ಟ್ರಧ್ವಜ ರಾಷ್ಟ್ರದ ಏಕತೆಯ, ಸ್ವಾತಂತ್ರ್ಯದ ಗುರುತು.  ಅದು ಪ್ರಜೆಗಳ ಅಭಿವೃದ್ದಿ, ಅಭಿಲಾಷೆ ಮತ್ತು ಆದರ್ಶಗಳನ್ನು ಪ್ರತಿನಿಧಿಸುತ್ತದೆ.  ಸ್ವರಾಷ್ಟ್ರದಲ್ಲಿ ಅದು ಜನತೆಯ ಮನ್ನಣೆ ಪ್ರೇಮಗಳಿಗೆ ಅರ್ಹವಾಗುತ್ತದೆ.  ಅದರಲ್ಲಿ ರಾಷ್ಟ್ರಾಭಿಮಾನ, ಹರ್ಷ, ರಾಷ್ಟ್ರಪ್ರೇಮ, ಆತ್ಮಗೌರವ ಮೊದಲಾದ ಉನ್ನತ ಮನೋಭಾವಗಳನ್ನು ಕೆರಳಿಸುತ್ತದೆ.  ವಿದೇಶದಲ್ಲಿ ಸ್ವತಂತ್ರ ಜನತೆಯ ಲಾಂಛನವೆಂದೂ ಗೌರವ ಪಡೆಯುತ್ತದೆ.  ಅನೇಕ ರಾಷ್ಟ್ರಧ್ವಜಗಳು ರಾಷ್ಟ್ರಗಳ ಮುಖ್ಯ ಘಟನೆಗಳನ್ನು, ವಿಚಾರಗಳನ್ನು ತೋರಿಸುತ್ತವೆ.  ಉದಾ: ಆರ್ಜಂಟೀನದ ಧ್ವಜದಲ್ಲಿರುವ ಸೂರ್ಯ 1810 ರ ಕ್ರಾಂತಿಯನ್ನೂ ಬ್ರಿಟನ್ನಿನ ಧ್ವಜದಲ್ಲಿರುವ ಕತ್ತರಿ ಪಟ್ಟೆಗಳು ಇಂಗ್ಲೆಂಡ್, ಸ್ಕಾಟ್‍ಲೆಂಡ್ ಮತ್ತು ಐರ್ಲೆಂಡ್‍ಗಳ ಒಕ್ಕೂಟವನ್ನೂ ಗುರುತಿಸುತ್ತವೆ.  ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅವಮಾನ ಮಾಡುವುದು, ಅಗೌರವ ತೋರಿಸುವುದು ಅಪರಾಧವಾಗುತ್ತದೆ.  ಅಮೆರಿಕ, ಭಾರತ ಮೊದಲಾದ ದೇಶಗಳು ಅವಮಾನಕರವಾದ ಬಗೆಯಲ್ಲಿ ರಾಷ್ಟ್ರಧ್ವಜವನ್ನು ವ್ಯಾಪಾರಿ ಉದ್ದೇಶಗಳಿಗೆ ಬಳಸುವುದನ್ನು ತಡೆಗಟ್ಟುತ್ತವೆ.  ಅದನ್ನು ಯಾವುದೊಂದು ವಸ್ತುವನ್ನು ಸ್ವೀಕರಿಸುವುದಕ್ಕೆ, ತುಂಬಿಕೊಳ್ಳುವುದಕ್ಕೆ, ಇಟ್ಟುಕೊಳ್ಳುವುದಕ್ಕೆ, ಕಟ್ಟುವುದಕ್ಕೆ ಬಳಸಬಾರದು.  ಅದು ಪೋಷಾಕುಗಳ ಕ್ರೀಡಾಪಟುಗಳ ಸಮವಸ್ತ್ರಗಳ ಭಾಗವಾಗಿರಬಾರದು.  ತಿವಾಸಿ, ಕರವಸ್ತ್ರಗಳ ಮೇಲೆ ಅದರ ನಕ್ಷೆಯನ್ನು ಬಿಡಿಸಬಾರದು.  ಕಾಗದದ ಕೈಚೌಕ, ಪೆಟ್ಟಿಗೆ ಮೊದಲಾದ ಬಿಸುಡಬಹುದಾದ ವಸ್ತುಗಳ ಮೇಲೆ ಅದನ್ನು ಮುದ್ರಿಸಬಾರದು.  ಅದರ ಬಳಕೆಗೆ ಗೊತ್ತಾಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಅದು ಕೊಳೆಯಾಗಬಾರದು.  ಹರಿದಿರಬಾರದು.  ಅದರ ಎತ್ತರಕ್ಕೆ ಅಥವಾ ಅದಕ್ಕಿಂತ ಎತ್ತರಕ್ಕೆ ಬೇರಾವ ಧ್ವಜವನ್ನೂ ಹಾರಿಸಬಾರದು.  ಅದು ನೆಲಕ್ಕೆ ತಗುಲಬಾರದು.  ಉಪಯೋಗದಲ್ಲಿಲ್ಲದಾಗ ಅದನ್ನು ಸರಿಯಾಗಿ ಮಡಿಸಿ ಇಡಬೇಕು.  ಮಡಿಸುವಾಗ ಇಬ್ಬರು ಹಿಡಿದುಕೊಂಡು ಮಡಿಸಬೇಕು.  ಅದನ್ನು ಸ್ತಂಭದ ಮೇಲ್ಭಾಗದಲ್ಲಿ ಹಾರಿಸಬೇಕು.  ರಾಷ್ಟ್ರದ ಹಿರಿಯರು ತೀರಿಕೊಂಡಾಗ ಇಲ್ಲವೇ ಇತರ ಆಧಿಕೃತ ಶೋಕ ಸಂದರ್ಭಗಳಲ್ಲಿ ಮಾತ್ರ ಅದು ಅರ್ಧಮಟ್ಟದಲ್ಲಿರಬಹುದು.  ಒಂದಕ್ಕಿಂತ ಹೆಚ್ಚು ರಾಷ್ಟ್ರಗಳ ಧ್ವಜಗಳನ್ನು ಒಂದೇ ಸ್ತಂಭದಿಂದ ಹಾರಿಸಬಾರದು.  ಅದನ್ನು ಹಿಡಿದು ನಡೆಯುವಾಗ ಬಲಗೈಯಲ್ಲಿ ಹಿಡಿಯಬೇಕು.  ಆರೋಹಿಸುವಾಗ ಮತ್ತು ಇಳಿಸುವಾಗ ಅನುಸರಿಸಬೇಕಾದ ಕ್ರಮವನ್ನು ಚಾಚೂ ಮೀರಬಾರದು.  ಅದರ ಮೇಲ್ಭಾಗ ಯಾವುದೆಂಬುದನ್ನು ನೆನಪಿಟ್ಟು ಎಚ್ಚರಿಕೆಯಿಂದ ಹಾರಿಸಬೇಕು.  ಧ್ವಜ ಹರಿದಿದ್ದರೆ ರಿಪೇರಿ ಮಾಡಬಹುದು.  ಕೊಳೆಯಾಗಿದ್ದರೆ ಒಗೆದು ಸ್ವಚ್ಛಮಾಡಬಹುದು.  ಸಶಸ್ತ್ರಪಡೆಗಳಲ್ಲಿ ಸೇವೆ ಸಲ್ಲಿಸಿದ ಯೋಧರ, ನಾಡಿನ ನಾಯಕರ ಶವಗಳಿಗೆ, ಶವಪೆಟ್ಟಿಗೆಗಳಿಗೆ ಅದನ್ನು ಹೊದಿಕೆಯಂತೆ ಬಳಸಬಹುದು.  ಆದರೆ ಶವದೊಂದಿಗೆ ಅದನ್ನು ಸುಡುವುದನ್ನಾಗಲಿ ಹೂಳುವುದನ್ನಾಗಲಿ ಮಾಡಲಾಗದು.  ಅದು ಹಳತಾಗಿ ಉಪಯೋಗಕ್ಕೆ ಬಾರದಂತಾದಾಗ ಮಾತ್ರ ಅದನ್ನು ಮರ್ಯಾದೆಯಿಂದ ಸುಡುವುದೇ ಮೊದಲಾದ ಉಪಾಯಗಳಿಂದ ನಾಶಮಾಡಬಹುದು.  ರಾಷ್ಟ್ರ ಪ್ರೇಮಕ್ಕಾಗಿ ಆದರ್ಶವಾಗಿ ಬಾಳಬೇಕು,  ರಾಷ್ಟ್ರದ ಸಲುವಾಗಿ ತಮ್ಮ ಸರ್ವತ್ಯಾಗ ಮಾಡಲು ಪ್ರಾಣವನ್ನಾದರೂ ಅರ್ಪಿಸಲು ಸಿದ್ಧರಿರಬೇಕು ಎಂಬ ನೆನಪಿನಲ್ಲಿ ರಾಷ್ಟ್ರಧ್ವಜ ಸದಾ ಜ್ವಲಂತವಾಗಿರುತ್ತದೆ.  ಅಂತೆಯೇ ಜನತೆ ಧ್ವಜವನ್ನು ವಂದಿಸುತ್ತದೆ.  ಅದನ್ನು ಗೌರವಿಸುತ್ತದೆ. 
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ